ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸ್ಪರ್ಧೆಗೆ ಅರ್ಜಿಗಳ ಮಹಾಪೂರ

ಬೆಂಗಳೂರು, ಫೆ 6 :    ಬೆಂಗಳೂರಿನಲ್ಲಿ ಫೆ. 26ರಿಂದ ನಡೆಯಲಿರುವ 12ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಅರ್ಜಿಗಳ ಮಹಾಪೂರ ಹರಿದುಬಂದಿದೆ. 

ಚಿತ್ರೋತ್ಸವದಲ್ಲಿ ನಡೆಯಲಿರುವ ಏಷ್ಯಾ, ಭಾರತೀಯ, ಕನ್ನಡ ಮತ್ತು ಜನಪ್ರಿಯ ಕನ್ನಡ ಚಿತ್ರಗಳ ಸ್ಪರ್ಧೆಗೆ ನಿರೀಕ್ಷೆಗೂ ಮೀರಿದ ಅರ್ಜಿಗಳು ಬಂದಿವೆ. ಏಷ್ಯಾ ಚಿತ್ರಗಳ ಸ್ಪರ್ಧೆಯಲ್ಲಿ 100 ಚಿತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಬಂದಿರುವ ಅರ್ಜಿಗಳ ಸಂಖ್ಯೆ ಬರೋಬ್ಬರಿ 700!

ಕನ್ನಡ ಚಿತ್ರಗಳ ಸ್ಪರ್ಧೆಗೆ 126 ಅರ್ಜಿಗಳು ಬಂದಿದೆ. ಆದರಲ್ಲಿ ಅವುಗಳಲ್ಲಿ ಕೇವಲ 12 ಸಿನಿಮಾಗಳನ್ನು ಆಯ್ಕೆ ಮಾಡಬೇಕಿದೆ. ಭಾರತೀಯ ಚಿತ್ರ ಸ್ಪರ್ಧಾ ವಿಭಾಗಕ್ಕೆ 94 ಅರ್ಜಿಗಳು ಬಂದಿವೆ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ಎನ್. ಜೋಯಿಸ್ ಮಾಹಿತಿ ನೀಡಿದ್ದಾರೆ.