ವಿಶ್ವ ವಿಕಲಚೇತನರ ದಿನಾಚರಣೆ

ವಿಶ್ವ ವಿಕಲಚೇತನರ ದಿನಾಚರಣೆ International Day of Persons with Disabilities

ಹುಬ್ಬಳ್ಳಿ  03: ವಿಕಲಚೇತನ ಮಕ್ಕಳು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ವಿಕಲಚೇತನ ಮಕ್ಕಳು ದೇವರ ಸಮಾನರು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹೇಳಿದರು.  

ಇಂದು ಇಂದಿರಾ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಿಲ್ಲೆಯ ಸ್ವಯಂ ಸೇವಾ ಶಿಕ್ಷಣ ಸಂಸ್ಥೆಗಳು ಮತ್ತು ವಿಕಲಚೇತನರ ಸಂಘ ಸಂಸ್ಥೆಗಳು, ಮಜೇಥೀಯಾ ಫೌಂಡೇಶನ್‌-ಹುಬ್ಬಳ್ಳಿ, ಅದಮ್ಯ ಚೇತನ ಫೌಂಡೇಶನ್‌-ಹುಬ್ಬಳ್ಳಿ, "ಸಕ್ಷಮ" ಕರ್ನಾಟಕ-ಉತ್ತರ ಪ್ರಾಂತ, ಹುಬ್ಬಳ್ಳಿ, ಆಶಾಕಿರಣ-ಕಿಮ್ಸ್‌, ಧಾರವಾಡ ಜಿಲ್ಲೆಯ ವಿ.ಆರ್‌.ಡಬ್ಲ್ಯೂ, ಯು.ಆರ್‌.ಡಬ್ಲ್ಯೂ, ಎಮ್‌.ಆರ್‌.ಡಬ್ಲ್ಯೂ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  

ಈಗಾಗಲೇ ನಾನು ವೈಯಕ್ತಿಕವಾಗಿ ಸುಮಾರು 156 ತ್ರಿಚಕ್ರ ಸೈಕಲ್ ಗಳನ್ನು ವಿತರಣೆ ಮಾಡಿದ್ದೇನೆ. ಸರ್ಕಾರ ವಿಕಲಚೇತನ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅಲ್ಲದೇ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ವಿಕಲಚೇತನ ಮಕ್ಕಳ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಮೀನ ಮೇಷ ಮಾಡುವುದಿಲ್ಲ. ಸರ್ಕಾರದ ವಿವಿಧ ಯೋಜನೆಗಳ ಮೂಲಕ ವಿಕಲಚೇತನರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ವಿಕಲಚೇತನರ ಕುಂದುಕೊರತೆಗಳನ್ನು ಸರ್ಕಾರದ ಮಟ್ಟದಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಅವರು ತಿಳಿಸಿದರು.  

ಅಂಧ ಮಕ್ಕಳು ಧೈರ್ಯಗೆಡಬಾರದು. ಅವರು ಹಾಡಿದ ಹಾಡುಗಳು ಸುಶ್ರಾವ್ಯವಾಗಿದ್ದವು. ಅವರಲ್ಲಿ ಸಮಾಜದೊಂದಿಗೆ ಕೂಡಿ ಇರಬೇಕು ಎಂಬ ಭಾವನೆಯಿದೆ. ವಿಕಲಚೇತನ ಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಬೇಕು. ಅವರ ನೋವು ನಲಿವುಗಳಿಗೆ ಸ್ಪಂದಿಸಬೇಕಿದೆ. ಸಾರ್ವಜನಿಕರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಅವರಿಗೆ ಸಹಾಯ ಹಸ್ತವನ್ನು ನೀಡಬೇಕಾಗುತ್ತದೆ. ಅವರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಲಿ. ನಾವು ದುಡಿದ ಹಣದಲ್ಲಿ ಸ್ವಲ್ಪ ಭಾಗ ವಿಕಲಚೇತನರ ಏಳಿಗೆಗೆ ಬಳಸಿದರೆ ನಮ್ಮ ಜೀವನ ಸಾರ್ಥಕವಾಗಲಿದೆ. ಈಗಾಗಲೇ ಕೆಲವು ಸಮಾಜ ಸೇವಕರು ಶಾಲೆಗಳನ್ನು ಆರಂಭಿಸಿ, ಅವರ ಉದ್ಧಾರಕ್ಕೆ ಮುಂದಾಗಿದ್ದಾರೆ. ಪ್ರತಿನಿತ್ಯವೂ ವಿಕಲಚೇತನರ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದರು.  

ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನರಿಗೆ ಆತ್ಮಶಕ್ತಿಯೇ ದೊಡ್ಡ ಶಕ್ತಿಯಾಗಿದೆ. ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸಗಳಾಗಬೇಕು. ವಿಕಲಚೇತನರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಉನ್ನತ ಸಾಧನೆಗೈದಿದ್ದಾರೆ. ಸಾಧನೆಗೆ ದೈಹಿಕ ನ್ಯೂನ್ಯತೆ ಎಂದಿಗೂ ಅಡ್ಡಿಯಾಗುವುದಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ತ್ರಿಚಕ್ರ ವಾಹನ ವಿತರಿಸುವ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ರೂ.75 ಲಕ್ಷ ವೆಚ್ಚದಲ್ಲಿ 38 ಹೊಸ ವಾಹನಗಳನ್ನು ವಿಕಲಚೇತನರಿಗೆ ವಿತರಿಸಲಾಗುತ್ತಿದೆ. ವಿಕಲಚೇತನರಿಗಾಗಿ ಕೇಂದ್ರ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಕಿಮ್ಸಗೆ ವಿಶೇಷಚೇತನರಿಗಾಗಿ ಸಾಧನ ಸಲಕರಣೆಗಳನ್ನು ಒದಗಿಸಲಾಗಿದೆ. ಅಲ್ಲದೇ ರೂ.23 ಲಕ್ಷ ವೆಚ್ಚದಲ್ಲಿ ವಿಕಲಚೇತನರಿಗೆ ವಿಶೇಷ ಸಾಮಗ್ರಿಗಳನ್ನು ಇಂದು ವಿತರಿಸಲಾಗುತ್ತಿದೆ. ಈ ಹಿಂದೆ ಮೂರು ಸಾವಿರ ಮಠದಲ್ಲಿ ವಿಕಲಚೇತನರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಒಟ್ಟಿನಲ್ಲಿ ವಿಕಲಚೇತನರಿಗೆ ಅವಕಾಶ ಕಲ್ಪಿಸಿ ಕೊಡುವ ಕೆಲಸ ಕಾರ್ಯಗಳಾಗಬೇಕು ಎಂದು ಅವರು ಬಣ್ಣಿಸಿದರು.  

ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ವಾಹನಗಳು ಹಾಗೂ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು. ವಿಶೇಷಚೇತನರ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು ಹಾಗೂ ಸ್ವಯಂ ಸೇವಾಸಂಸ್ಥೆಯ ಮುಖ್ಯಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.