ಸುಸ್ಥಿರ ಅಭಿವೃದ್ಧಿ ಮತ್ತು ಜೀವ ಸುರಕ್ಷತೆಗೆ ಸೂಕ್ಷ್ಮಜೀವ ವಿಜ್ಞಾನ ಸಹಕಾರಿ

ಸುಸ್ಥಿರ ಅಭಿವೃದ್ಧಿ ಮತ್ತು ಜೀವ ಸುರಕ್ಷತೆಗೆ ಸೂಕ್ಷ್ಮಜೀವ ವಿಜ್ಞಾನ ಸಹಕಾರಿ Microbiology contributes to sustainable development and life safety

ಲೋಕದರ್ಶನ ವರದಿ 

 ಕಲಬುರಗಿ 26 :  ದೇಶದ ಸುಸ್ಥಿರ ಅಭಿವೃದ್ಧಿ ಮತ್ತು ಮಾನವನ ಜೀವದ ಸುರಕ್ಷತೆ ಕಾಪಾಡಲು ಸೂಕ್ಷ್ಮಜೀವ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನಗಳು ಸಹಕಾರಿಯಾಗಿವೆ. ಭವಿಷ್ಯದ ನಾಳೆಗಾಗಿ ಆರೋಗ್ಯಕರ ಪ್ರಪಂಚವನ್ನು ರೂಪಿಸಲು ಕೃಷಿ, ಪರಿಸರ, ವೈದ್ಯಕೀಯ, ಕೈಗಾರಿಕೆ ಮತ್ತು ಓಷಧ ಕ್ಷೇತ್ರಗಳ ಸಂಶೊಧನೆಗಳು ಜೀವ ಸಂಕುಲಗಳ ರಕ್ಷಣೆಗೆ ನೆರವಾಗಲಿವೆ ಎಂದು ಆಂಧ್ರ​‍್ರದೇಶದ ಶಾಸಕ ಹಾಗೂ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಅಲುಮ್ನಿ ಗದ್ದೆ ರಾಮಮೋಹನ್ ಹೇಳಿದರು.  

ಗುಲಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಪ್ಯಾಶ್ಚರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಸುವರ್ಣ ಮಹೋತ್ಸವ ವರ್ಷಾಚರಣೆ ಮತ್ತು 'ಸೂಕ್ಷ್ಮಜೀವಿಗಳ ವ್ಯಾಪ್ತಿ: ಉತ್ತಮ ನಾಳೆಗಾಗಿ ತಂತ್ರಜ್ಞಾನ' ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕೋವಿಡ್ ನಂತಹ ವಿಷಮ ಸ್ಥಿತಿಯ ಸಂದರ್ಭಗಳಲ್ಲಿ ಜಾಗತಿಕ ಆರೋಗ್ಯ ರಕ್ಷಣೆ ಸೂಕ್ಷ್ಮಜೀವ ವಿಜ್ಞಾನ, ಆಧುನಿಕ ತಂತ್ರಜ್ಞಾನ, ಸೋಂಕು ನಿಯಂತ್ರಣ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಜೀವ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿತ್ತು.

ಮುಂದಿನ ಪೀಳಿಗೆಯ ಭವಿಷ್ಯ ಮತ್ತು ಆರೋಗ್ಯಕ್ಕಾಗಿ ರೋಗಗಳ ಸೋಂಕಿನ ಅರಿವು, ರೋಗದ ಮುನ್ನೆಚ್ಚರಿಕೆ, ರೋಗ ನಿಯಂತ್ರಣ, ಅಗತ್ಯ ಲಸಿಕೆ, ಪ್ರತಿರೋಧಕ ಓಷಧಗಳು ಮತ್ತು ಚಿಕಿತ್ಸೆ ಸುಧಾರಣೆ ಬಗ್ಗೆ ಮುಂಜಾಗ್ರತೆ ವಹಿಸುವುದು ಅಷ್ಟೇ ಮುಖ್ಯ. ತಂತ್ರಜ್ಞಾನ ಬೆಳದಂತೆ ವೈದ್ಯ ವಿಜ್ಞಾನದ ಮುಂದೆ ಹಲವು ಸವಾಲುಗಳು ಎದುರಾಗುತ್ತಿವೆ. ಆದರಿಂದ ಸೂಕ್ಷ್ಮಜೀವಶಾಸ್ತ್ರ ಮತ್ತು ಮುಂದುವರಿದ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿ ಮತ್ತು ಪ್ರಯೋಗಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು ಎಂದರು.        

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್‌. ಉಡಿಕೇರಿ ಮುಖ್ಯ ಅತಿಥಿಯಾಗಿ ಮಾತನಾಡಿ ಸುವರ್ಣ ಮಹೋತ್ಸವ ಮತ್ತು ಸಮ್ಮೇಳನ ಆಯೋಜನೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸ್ನೇಹ ಮತ್ತು ಬಾಂಧವ್ಯ ಬೆಸೆಯುವ ಕಾರ್ಯಕ್ರಮ. ವಿಭಾಗ ಆರಂಭದಿಂದ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಬೋಧನೆ ಕಡೆಗೆ ಸೆಳೆದು ಉತ್ತಮ ಪ್ರತಿಭೆಗಳನ್ನಾಗಿ ರೂಪಿಸಿದ್ದಾರೆ. ವಿಭಾಗದ ಉನ್ನತ ಸಾಧನೆಯಿಂದ ಈ ಸಮ್ಮೇಳನ ಜರುಗುತ್ತಿದೆ. ಇದರ ಭಾಗವಾಗಿ ಸೂಕ್ಷ್ಮ ಜೀವ ಮತ್ತು ಮಾನವನ ಅಂಗಗಳ ಸುರಕ್ಷತೆ, ಓಸಧೋಪಚಾರ, ವೈರಸ್‌ಗಳ ನಿಯಂತ್ರಣ, ಕೃಷಿ ಮತ್ತು ಕೈಗಾರಿಕೆಗಳ ಪ್ರಗತಿಯಲ್ಲಿ ನೂತನ ತಂತ್ರಜ್ಞಾನ ಬಹು ಉಪಯೋಗಕರವಾಗಿದೆ.