ಬಳ್ಳಾರಿ, ಮೇ 21,ಕಂಪ್ಲಿ ತಾಲೂಕಿನ ಅರಳಿಹಳ್ಳಿ ತಾಂಡಾದಲ್ಲಿ ನಡೆಯಲಿದ್ದ 3 ಅಪ್ರಾಪ್ತ ವಯಸ್ಸಿನ ಬಾಲಕೀಯರ ಬಾಲ್ಯವಿವಾಹವನ್ನು ಅಧಿಕಾರಿಗಳು ಸರಿಯಾದ ಸಮಯಕ್ಕೆ ಮಧ್ಯಪ್ರವೇಶಿಸಿದ ಪರಿಣಾಮ ಮದುವೆಗೆ ತಡೆ ಬಿದ್ದಿದೆ.ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ ಅವರ ನೇತೃತ್ವದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಂಡವು ಪೊಲೀಸ್ ಇಲಾಖೆಯೊಡಗೂಡಿ ನಡೆಸಿದ ಕಾರ್ಯಾಚರಣೆಯಲ್ಲಿ ಮದುವೆಯನ್ನು ನಿಲ್ಲಿಸಲಾಗಿದೆ.
ಮಕ್ಕಳ ಸಹಾಯವಾಣಿಗೆ ಬಂದ ಮಾಹಿತಿ ಅನುಸಾರ ಕಾರ್ಯಪ್ರವೃತ್ತರಾದ ಸಿಡಿಪಿಒ ಅಮರೇಶ ಅವರು, ಗ್ರಾಮಕ್ಕೆ ಭೇಟಿ ನೀಡಿ ಪೋಷಕರಿಗೆ ಕಾನೂನು ತಿಳಿವಳಿಕೆ ನೋಟಿಸ್ ನೀಡಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡರು.ಈ ಸಂದರ್ಭದಲ್ಲಿ ಸಿಡಿಪಿಒ ಅಮರೇಶ ಅವರು ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಸಂಯೋಜಕ ಚಿದಾನಂದ, ಪೊಲೀಸ್ ಇಲಾಖೆಯ ನಾಗನಗೌಡ ಸೇರಿದಂತೆ ಅನೇಕರು ಇದ್ದರು.