ಆರ್ಥಿಕ ಬಡತನಕ್ಕಿಂತ ವೈಚಾರಿಕ ದಾರಿದ್ರ್ಯ ಸಮಾಜಕ್ಕೆ ಮಾರಕ: ಕೃಷ್ಣಾ ಹಡಪದ

ಆರ್ಥಿಕ ಬಡತನಕ್ಕಿಂತ ವೈಚಾರಿಕ ದಾರಿದ್ರ್ಯ ಸಮಾಜಕ್ಕೆ ಮಾರಕ: ಕೃಷ್ಣಾ ಹಡಪದ  Intellectual poverty is more dangerous to society than economic poverty: Krishna Hadapad

ಗದಗ 27: ಪರಿಸ್ಥಿತಿ ಬಡತನ ಇದ್ದರೂ ಪರವಾಗಿಲ್ಲ, ಆದರೆ ನಮ್ಮ ಆಲೋಚನೆ ಮತ್ತು ವಿಚಾರಗಳು ಮಾತ್ರ ಎಂದಿಗೂ ಭಿಕಾರಿಯಾಗಬಾರದು" ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಅವರು ಮಾರ್ಮಿಕವಾಗಿ ನುಡಿದರು.      

ನಗರದಲ್ಲಿ ಸವಿತಾ ಸಮಾಜದ ಕ್ರಿಕೆಟ್ ತಂಡದ ವತಿಯಿಂದ ಹಮ್ಮಿಕೊಂಡಿದ್ದ ತಮ್ಮ 46ನೇ ಜನ್ಮದಿನಾಚರಣೆಯ ಸೌಹಾರ್ದ ಸಮಾರಂಭದಲ್ಲಿ ಸಮಾಜದ ಯುವ ಕ್ರೀಡಾಪಟುಗಳು ಹಾಗೂ ಮುಖಂಡರಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಹಣದ ಬಡತನ ತಾತ್ಕಾಲಿಕ, ಆದರೆ ಸಂಸ್ಕಾರದ ಕೊರತೆ ಇಡೀ ಸಮಾಜವನ್ನು ದಾರಿದ್ರ್ಯಕ್ಕೆ ದೂಡುತ್ತದೆ. ಕ್ರೀಡಾ ಮನೋಭಾವನೆಯು ಯುವಕರಲ್ಲಿ ಶಿಸ್ತು ಮತ್ತು ಸಕಾರಾತ್ಮಕ ಯೋಚನೆಗಳನ್ನು ಬೆಳೆಸುತ್ತದೆ. ಇಂದಿನ ಯುವ ಪೀಳಿಗೆ ಕೇವಲ ಹಣದ ಬೆನ್ನತ್ತದೆ, ವೈಚಾರಿಕ ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡು ಸಮಾಜದ ಉನ್ನತಿಗೆ ಹಾಗೂ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೃಷ್ಣಾ ಎಚ್ ಹಡಪದ ಕರೆ ನೀಡಿದರು.       

ಇಂದಿನ ಯುವಕರು ಕೈಯಲ್ಲಿ ದುಬಾರಿ ಮೊಬೈಲ್ ಹಿಡಿದು, ಸಾಲ ಮಾಡಿ ಬೈಕ್ ಖರೀದಿಸಿ ಸಮಾಜದಲ್ಲಿ ಸುಳ್ಳು ಶ್ರೀಮಂತಿಕೆ ಪ್ರದರ್ಶಿಸುತ್ತಿದ್ದಾರೆ. ಆದರೆ ನೆನಪಿರಲಿ, ಹೊರಗಿನ ಅಬ್ಬರದ ಬದುಕಿಗಿಂತ ಒಳಗಿನ ಸಂಸ್ಕಾರ ಮುಖ್ಯ. ಬಟ್ಟೆ ಕೊಳೆಯಾದರೂ ಪರವಾಗಿಲ್ಲ, ಮನಸ್ಸು ಮತ್ತು ಆಲೋಚನೆಗಳು ಕೊಳಕಾಗಬಾರದು. ಲೋಕದಲ್ಲಿ ’ದುಡಿಮೆಯೇ ದೊಡ್ಡಪ್ಪ’ ಎಂಬ ಗಾದೆಯಿದೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೇ ಹೊರತು, ಸೋಮಾರಿಗಳಾಗಿ ತಂದೆ-ತಾಯಂದಿರ ದುಡಿಮೆಯ ಮೇಲೆ ಆಡಂಬರದ ಬದುಕು ನಡೆಸುವುದು ವೈಚಾರಿಕ ಭಿಕ್ಷುಕತನಕ್ಕೆ ಸಮಾನ ಎಂದು ಕಿವಿಮಾತು ಹೇಳಿದರು.      

ಇಂದಿನ ಯುವ ಪೀಳಿಗೆ ಮೊಬೈಲ್ ರೀಲ್ಸ್‌ ಮತ್ತು ಸಾಮಾಜಿಕ ಜಾಲತಾಣಗಳ ಮಾಯಾಲೋಕದಲ್ಲಿ ಸಿಲುಕಿ ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದೆ. ಲೈಕ್ಸ್‌ ಮತ್ತು ಕಮೆಂಟ್ಸ್‌ಗಳ ಹಿಂದೆ ಓಡುವ ಯುವಕರು, ನಿಜ ಜೀವನದ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕ್ರೀಡೆ ಮತ್ತು ಉತ್ತಮ ಪುಸ್ತಕಗಳ ಓದು ನಿಮ್ಮಲ್ಲಿ ಸಕಾರಾತ್ಮಕ ಯೋಚನೆಗಳನ್ನು ಬೆಳೆಸುತ್ತದೆ ಎಂದು ಯುವ ಜನಾಂಗಕ್ಕೆ ಕರೆ ನೀಡಿದರು.        

ಗದಗ ಜಿಲ್ಲಾ ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ ಅವರು ಮಾತನಾಡಿ ಕೃಷ್ಣಾ ಎಚ್ ಹಡಪದ ಅವರು ನಮ್ಮ ಸಮಾಜಕ್ಕೆ ಕೇವಲ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಜಿಲ್ಲಾಧ್ಯಕ್ಷರಾಗಿ ಸಮಾಜವನ್ನು ಮುನ್ನಡೆಸುತ್ತಿರುವ ಅವರ ಇಂತಹ ವೈಚಾರಿಕ ಚಿಂತನೆಗಳು ಇಂದಿನ ದಾರಿ ತಪ್ಪುತ್ತಿರುವ ಯುವ ಪೀಳಿಗೆಗೆ ದಾರೀದೀಪವಾಗಲಿವೆ" ಎಂದರು.      ಹಿರಿಯರಾದ ಆಂಜನೇಯ ಆದೋನಿ ಅವರು ಮಾತನಾಡಿ ಬಡತನವನ್ನು ಮೆಟ್ಟಿ ನಿಲ್ಲುವ ತಾಕತ್ತು ಕೇವಲ ಉನ್ನತ ಯೋಚನೆಗಳಿಗೆ ಮಾತ್ರ ಇದೆ ಎಂಬುದನ್ನು ಕೃಷ್ಣಾ ಅವರು ತಮ್ಮ ಬದುಕಿನ ಮೂಲಕ ಮತ್ತು ಈ ಅದ್ಭುತ ಮಾತುಗಳ ಮೂಲಕ ಸಾಬೀತುಪಡಿಸಿದ್ದಾರೆ" ಎಂದು ಶ್ಲಾಘಿಸಿದರು. ಹಿರಿಯರಾದ ನರಸಿಂಹ ಗುರುಜಾಲ್ಕರ್ ಅವರು ಮಾತನಾಡಿ ವಿಚಾರಗಳಲ್ಲಿ ಭಿಕ್ಷುಕತನ ಇರಬಾರದು ಎನ್ನುವ ಇವರ ಮಾತು ಪ್ರತಿಯೊಬ್ಬರಲ್ಲೂ ಆತ್ಮಾವಲೋಕನ ಮೂಡಿಸುವಂತದ್ದು. ಇಂತಹ ಧೀಮಂತ ನಾಯಕತ್ವ ನಮ್ಮ ಸಮಾಜಕ್ಕೆ ಅತ್ಯಗತ್ಯ" ಎಂದು ಹಾರೈಸಿದರು.             

ಆರ್ಥಿಕವಾಗಿ ಹಿಂದುಳಿಯುವುದು ಅಪರಾಧವಲ್ಲ, ಆದರೆ ಆಲೋಚನೆಗಳಲ್ಲಿ ದಾರಿದ್ರ್ಯ ಹೊಂದಿರುವುದು ಸಮಾಜಕ್ಕೆ ದೊಡ್ಡ ಶಾಪ.* ತತ್ವಪದಕಾರರ ಆಶಯದಂತೆ ಬದುಕಿನ ನಿಜವಾದ ಶ್ರೀಮಂತಿಕೆ ಇರುವುದು ಹಣದಲ್ಲಲ್ಲ, ನಮ್ಮ ವಿಚಾರ ಮತ್ತು ಸಂಸ್ಕಾರದಲ್ಲಿ ಎಂಬುದನ್ನು ಕೃಷ್ಣಾ ಎಚ್‌. ಹಡಪದ ಅವರು ತಮ್ಮ ಮಾರ್ಮಿಕ ನುಡಿಗಳ ಮೂಲಕ ಸಾರ್ವಜನಿಕರಿಗೆ ನೆನಪಿಸಿದ್ದಾರೆ.  ತಮ್ಮ 46ನೇ ಜನ್ಮದಿನದ ಸನ್ಮಾನ ಸಮಾರಂಭದಲ್ಲಿ ಅವರು ವ್ಯಕ್ತಪಡಿಸಿದ ಈ ಕಳಕಳಿ ಇಂದಿನ ಇಡೀ ಯುವ ಸಮೂಹಕ್ಕೆ ಒಂದು ದಿಕ್ಸೂಚಿಯಾಗಿದೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಬುದ್ಧ ವಿಚಾರಗಳು ಪ್ರತಿಯೊಬ್ಬರ ಮನೆಮನ ತಲುಪಬೇಕಿದೆ.  

-ಯಲ್ಲಪ್ಪ ರಾಯಚೂರ ಹಿರಿಯರು, ಸವಿತಾ ಸಮಾಜ, ಗದಗ.         

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಆಂಜನೇಯ ಆದೋನಿ, ಹೇಮಂತ ವಡ್ಡೆಪಲ್ಲಿ, ಶ್ರೀನಿವಾಸ ಕೋಟೆಕಲ, ಜಿಲ್ಲಾ ಖಜಾಂಚಿ ಅರುಣ ರಾಂಪೂರ, ಸವಿತಾ ಸಮಾಜದ ಕ್ರಿಕೆಟ್ ತಂಡದ ನಾಯಕ ಕೃಷ್ಣಾ ಬೂದೂರ, ಉಪನಾಯಕ ವೆಂಕಟೇಶ ಕೋಟೆಕಲ್ಲ, ತಂಡದ ಪ್ರಮುಖ ಆಟಗಾರರಾದ ಸುನಿಲ ರಾಯಚೂರ, ವಿಜಯ ಬೂದೂರ,  ವಿಶ್ವನಾಥ ರಾಯಚೂರ, ಪರಶುರಾಮ ಕೊಲ್ಪೂರ, ಗಣೇಶ ಕಡಮೂರ, ಪ್ರಕಾಶ ಬೂದೂರ, ಸಾಗರ ಹಡಪದ, ವಿನಾಯಕ ಗಜಕೋಶ, ಸಂದೀಪ ವಡ್ಡೆಪಲ್ಲಿ,  ತುಕಾರಾಮ ವಡ್ಡೆಪಲ್ಲಿ, ರಾಹುಲ್( ಮೊಮ್ಮಗ) ನಾರಾಯಣಪೇಟ್, ವಿನಾಯಕ ರಾಯಚೂರ, ಮುಂದಿನ ನಾಯಕರದ ಹರ್ಷವರ್ಧನ್ ರಾಯಚೂರ, ಹರ್ಷ ಕೊಲ್ಪುರ್, ರೋಹನ್ ರಾಯಚೂರ, ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಸಮಾಜದ ಯುವ ಕ್ರೀಡಾಪಟುಗಳು ಉಪಸ್ಥಿತರಿದ್ದು, ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರಿ ಗೌರವಿಸಿದರು.