ಗ್ಯಾರಂಟಿ ಯೋಜನೆಗಳ ಅನುಷ್ಠಾನ ಚುರುಕುಗೊಳಿಸಲು ಸೂಚನೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಚುರುಕುಗೊಳಿಸಲು ಸೂಚನೆ  Instructions issued to expedite the implementation of guarantee schemes

ಲೋಕದರ್ಶನ ವರದಿ 

ಹಾವೇರಿ, ಆ.31: ಜಿಲ್ಲೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ​‍್ಕವಾಗಿ ಜಾರಿಯಾಗುತ್ತಿದ್ದು, ಕೆಲವು ಯೋಜನೆಗಳ ಫಲಾನುಭವಿಗಳ ಮಾಹಿತಿ ನವೀಕರಣ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ ಅಧಿಕಾರಿಗಳಿಗೆ ಸೂಚಿಸಿದರು.  

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಅರ್ಹ ಫಲಾನುಭವಿಗಳು ಯಾವುದೇ ಗ್ಯಾರಂಟಿ ಯೋಜನೆಯಿಂದ ಹೊರಗುಳಿಯದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ನಿಗದಿತ ಅವಧಿಯೊಳಗೆ ಫಲಾನುಭವಿಗಳ ಸಮೀಕ್ಷೆ ಹಾಗೂ ಮಾಹಿತಿ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.  

ಶಕ್ತಿ ಯೋಜನೆ: ಹಾವೇರಿ ವಿಭಾಗದಲ್ಲಿ ಶಕ್ತಿ ಯೋಜನೆಯಡಿ ಇದುವರೆಗೆ 5.52 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ ಎಂದು ಕೆಎಸ್‌ಆರ್ಟಿಸಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬಸ್ ಕೊರತೆ ಇರುವ ಪ್ರದೇಶಗಳಲ್ಲಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿನ ಶೌಚಾಲಯ ಹಾಗೂ ಮೂಲಸೌಕರ್ಯಗಳನ್ನು ಪರೀಶೀಲಿಸಿ ಸ್ವಚ್ಛಗೊಳಿಸಲಾಗಿದ್ದು, ಅಗತ್ಯವಿರುವ ಕಡೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.