ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜಲಜೀವನ ಮಿಷನ್ ಯೋಜನೆ ಕಾಮಗಾರಿ ಪರೀಶೀಲನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ  ಜಲಜೀವನ ಮಿಷನ್ ಯೋಜನೆ ಕಾಮಗಾರಿ ಪರೀಶೀಲನೆ Inspection of Aquaculture Mission Project work in Gram Panchayat areas

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ  ಜಲಜೀವನ ಮಿಷನ್ ಯೋಜನೆ ಕಾಮಗಾರಿ ಪರೀಶೀಲನೆ 

ವಿಜಯಪುರ, 30: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ರವರು ತಾಳಿಕೋಟಿ ತಾಲೂಕಿನ ವಿವಿಧ ಗ್ರಾಮಗಳಾದ ಹಿರೂರ, ತಮದಡ್ಡಿ, ಸಾಸನೂರ, ಚಬನೂರ, ಕೊಣ್ಣೂರ ಹಾಗೂ ಪಡೇಕನೂರ, ಮುದ್ದೇಬಿಹಾಳ ತಾಲ್ಲೂಕಿನ ಮಡಿಕೇಶ್ವರ ಢವಳಗಿ,  ಕಾಳಗಿ, ಚಲಮಿ, ಚಲಮಿ ತಾಂಡಾ ಹಾಗೂ ಮುದೂರ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು ಸ್ಥಾನಿಕ ಸ್ಥಳ ಪರೀಶೀಲನೆ ನಡೆಸಿದರು. 

ಮನೆ-ಮನೆಗೆ ಅಳವಡಿಸಲಾದ ನಳಗಳ ಸಂಪರ್ಕದ ಬಗ್ಗೆ ಫಲಾನುಭವಿಗಳೊಂದಿಗೆ ಚರ್ಚಿಸಿ ಖಾತ್ರಿಪಡಿಸಿಕೊಂಡರು. ಪ್ರತಿ ಮನೆ-ಮನೆಗೂ ಸಕಾಲದಲ್ಲಿ ನೀರು ಸರಬರಾಜು ಆಗುವಂತೆ ಸ್ಥಳದಲ್ಲಿನ ಅಧಿಕಾರಿಗಳಿಗೆ ಸೂಚಿಸಿದರು. 

ನಳಗಳಲ್ಲಿ ನೀರು ಪ್ರತಿದಿನ ಪೂರೈಸುವ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಿದರು. ಗುಣಮಟ್ಟದ ಕಾಮಗಾರಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳ ಪಾತ್ರ  ಮತ್ತು ಗುತ್ತಿಗೆದಾರರ ಜವಬ್ದಾರಿ ಎಷ್ಟು ಇದೆಯೋ ಅಷ್ಟೇ ಹೊಣೆ ಕಾಮಗಾರಿ ಗುಣಮಟ್ಟ ಮತ್ತು ಸ್ವಚ್ಚತೆ ಕಾಪಾಡಿಕೊಳ್ಳುವುದು ಮತ್ತು ಅದರ ಸದುಪಯೋಗ ಪಡಿಸಿಕೊಳ್ಳುವ ಜವಬ್ದಾರಿ ಸಾರ್ವಜನಿಕರ ಮೇಲೂ ಇದೆ. ನೀರು ಪೋಲಾಗದಂತೆ ಮಿತವಾಗಿ ಬಳಸಬೇಕು ಎಂದು ಸಿಇಒ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಜಲ ಜೀವನ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಖುದ್ದಾಗಿ ಪರೀಶೀಲನೆ ನಡೆಸಿದ ಸಿಇಓ ಅವರು ಪ್ರತಿನಿತ್ಯ ಕಡ್ಡಾಯವಾಗಿ ಮನೆ-ಮನೆಗೂ ಸಾಕಷ್ಟು ಪ್ರಮಣ ನೀರನ್ನು ಸರಬರಾಜು ಮಾಡಬೇಕು. ನೀರು ಸರಬರಾಜು ಮಾಡುವ ಪೂರ್ವದಲ್ಲಿ  ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡಬೇಕು ಮತ್ತು ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಗ್ರಾಮಗಳಲ್ಲಿರುವ ಹಳೆಯ ಸಂಪರ್ಕಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ಜಲ ಜೀವನ್ ಮಿಷನ್ ಯೋಜನೆಯಡಿ ನೀಡಲಾದ ಹೊಸ ನಳ ಸಂಪರ್ಕಗಳ ಮೂಲಕ ನೀರನ್ನು ಪೂರೈಸಬೇಕು. ಈ ಎಲ್ಲ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಬೇಕು. ಪ್ರಸ್ತುತ ಮಳೆಗಾಲ ಇರುವುದರಿಂದ ಕಡ್ಡಾಯವಾಗಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲಕ ಗ್ರಾಮೀಣ ಜನರ ಅರೋಗ್ಯವನ್ನು ಕಾಪಾಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ನಿರ್ವಹಣೆ ಮಾಡಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ನಂತರ ಕೊಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಪರೀಶೀಲನೆ ಮಾಡಿದರು.ಆಸ್ಪತ್ರೆಯ ಎಲ್ಲ ಮೂಲಭೂತ ಸೌಕರ್ಯಗಳ ಕುರಿತು ಪರೀಶೀಲಿಸಿ, ಪ್ರತಿನಿತ್ಯ ಆಸ್ಪತ್ರೆಯ ಒಳಾಂಗಣ ಹಾಗೂ ಹೊರಾಂಗಣ ಆವರಣಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಒಟ್ಟಾರೆಯಾಗಿ ಸ್ವಚ್ಛತೆಗೆ ಆದ್ಯತೆ ನೀಡಲು ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆ ನೀಡಿದರು. 

ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಎನ್‌. ಎಸ್‌. ಮಸಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್‌. ಎಸ್‌. ಹಿರೇಗೌಡರ, ವಿ.ಬಿ.ಗೊಂಗಡಿ, ಕಿರಿಯ ಅಭಿಯಂತರ ಸಿ. ಎಲ್‌. ರಾಠೋಡ ಹಿರೂರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ ಅಂಜುಟಿಗಿ, ಸಾಸನೂರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ದೇವೂರ, ಕೊಣ್ಣೂರ ಪಂಚಾಯತಿ ಅಭಿವೃದ್ಧಿ ಅಧಿಕಾರಿ  ಸಾವಿತ್ರಿ ಬಿರಾದಾರ, ಮಡಿಕೇಶ್ವರ ಪಂಚಾಯತಿ ಅಭಿವೃದ್ಧಿ ಅಧಿಕಾರಿ  ಬಿ. ಎಸ್‌. ಹಿರೇಕುರಬರ, ಢವಳಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ ಹಿರೇಮಠ, ಕಾಳಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ  ಯಕ್ಸಾಂಬ್, ಯರಝರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಾ ಮುದಗಲ್, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.