ವಿಶೇಷ ಪ್ಯಾಕೇಜ್‌ನಡಿ ವಿಶ್ವಕರ್ಮ ಸಮುದಾಯವನ್ನು ಸೇರಿಸಲು ಒತ್ತಾಯ

ಬೆಂಗಳೂರು,  ಮೇ 7, ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ವಿಶ್ವಕರ್ಮ ಸಮುದಾಯದವರಿದ್ದು, ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರನ್ನೂ ಕೂಡ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‌ನಡಿ ಸೇರಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಮಿತಿ ರಾಜ್ಯಾಧ್ಯಕ್ಷೆ ಗಾಯತ್ರಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲಾಕ್‌ಡೌನ್ ಪರಿಣಾಮದಿಂದ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ  ವಿಶ್ವಕರ್ಮ ಜನಾಂಗದ ಕಾರ್ಮಿಕರಿಗೂ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿ,  ಸಹಾಯ  ಮಾಡಬೇಕು. ಪ್ರಮುಖವಾಗಿ ಕುಲ ಕಸುಬುಗಳನ್ನೇ ನಂಬಿದ್ದಾರೆ. ಆದರೆ, ಕೊರೋನಾ ಸೋಂಕು ತಡೆಗಟ್ಟುವ  ನಿಟ್ಟಿನಲ್ಲಿ ಜಾರಿಗೊಳಿಸಿದ ಲಾಕ್ ಡೌನ್ ಪರಿಣಾಮ ಆರ್ಥಿಕವಾಗಿ ಭಾರೀ ನಷ್ಟ  ಹೊಂದಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರವೇ ನಮ್ಮ ಸಹಾಯಕ್ಕೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ  ನಾಲ್ಕತ್ತು ದಿನಗಳಿಂದ ಲಾಕ್ ಡೌನ್ ಜಾರಿಯಾಲಿದ್ದು, ಅನೇಕ ವಲಯದ ಜನರು ಸಂಕಷ್ಟದಲ್ಲಿ  ಸಿಲುಕಿದ್ದಾರೆ.ಆದರೆ, ರಾಜ್ಯ ಸರ್ಕಾರ ವಿಶ್ವಕರ್ಮ ಸಮುದಾಯದವರನ್ನು ಹೊರಗಿಟ್ಟು,  ಇತರರಿಗೆ ಪ್ಯಾಕೇಜ್ ಘೋಷಣೆ ಮಾಡಿರುವುದು ಸರಿಯಲ್ಲ.ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರು,1,601ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ,  ಇದರಲ್ಲಿ ವಿಶ್ವಕರ್ಮ ಸಮುದಾಯವನ್ನು ಹೊರಗಿಟ್ಟಿರುವುದು ಸರಿಯಲ್ಲ. ಅಲ್ಲದೆ, ಪಂಚ ಕಸುಬು  ಕೆಲಸಗಾರರಾದ ವಿಶ್ವಕರ್ಮ ಸಮಾಜದ ಕಷ್ಟ-ನಷ್ಟಗಳು ರಾಜ್ಯ ಸರ್ಕಾರಕ್ಕೆ  ಕಾಣಿಸುತ್ತಿಲ್ಲವೇ. ಈ ಕೂಡಲೇ ಶ್ರಮಿಕ ವರ್ಗ ವಿಶ್ವಕರ್ಮ ಜನಾಂಗಕ್ಕೂ ವಿಶೇಷ ಪ್ಯಾಕೇಜ್  ವಿಸ್ತರಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು  ಅವರು ಎಚ್ಚರಿಕೆ ನೀಡಿದ್ದಾರೆ.