ನವದೆಹಲಿ,
ಮಾ ೩೧, ಜಗತ್ತಿನೆಲ್ಲೆಡೆ ಕೊರೊನಾ ವೈರಸ್ ನಿಂದಾಗಿ ಸಾವುಗಳ ಸಂಖ್ಯೆ ಏರುಗತಿಯಲ್ಲಿ
ಮುಂದುವರಿದಿದ್ದು, ೩೭,೫೦೦ಕ್ಕೆ ತಲುಪಿದೆ. ಭಾರತದಲ್ಲಿ ಸೋಮವಾರ ಒಂದೇ ದಿನ, ೨೪
ಗಂಟೆಗಳಲ್ಲಿ ೨೨೭ ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ ೧,೨೫೧
ಏರಿಕೆಗೊಂಡಿದ್ದು, ೩೨ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ
ಮೂಲಗಳು ದೃಢಪಡಿಸಿವೆ.ಐರೋಪ್ಯ ದೇಶಗಳಲ್ಲಿ ಕೊರೊನಾ ಸೋಂಕು ಹಬ್ಬುವುದರಲ್ಲಿ
ಸದ್ಯದಲ್ಲೇ ಸ್ಥಿರತೆ ಕಂಡು ಬರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರೀಕ್ಷೆ
ವ್ಯಕ್ತಪಡಿಸಿದ್ದರೂ, ಸ್ಪೇನ್ ಸೋಂಕಿತರ ಸಂಖ್ಯೆಯಲ್ಲಿ ಚೈನಾವನ್ನೂ ಮೀರಿಸಿದೆ.
ನಂತರ ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕಾ ಹಾಗೂ ಇಟಲಿ ಸ್ಥಾನ ಪಡೆದುಕೊಂಡಿವೆ.ಅಮೆರಿಕಾದಲ್ಲಿ
ರಾಜಧಾನಿ ವಾಷಿಂಗ್ಟನ್ ನಂತರ ವರ್ಜೀನಿಯಾ ಹಾಗೂ ಮೇರಿಲ್ಯಾಂಡ್ ರಾಜ್ಯಗಳಲ್ಲಿ
ಲಾಕ್ ಡೌನ್ ಆದೇಶಗಳನ್ನು ಜಾರಿ ಮಾಡಲಾಗಿದೆ. ದೇಶದಲ್ಲಿ ೧೦ ಲಕ್ಷ ಜನರಿಗೆ ಕೊರೊನಾ
ವೈರಸ್ ಪರೀಕ್ಷೆ ನಡೆಸಲಾಗಿದ್ದು ಇದೊಂದು ಮೈಲಿಗಲ್ಲು ಎಂದು ಅಧ್ಯಕ್ಷ ಡೊನಾಲ್ಡ್
ಟ್ರಂಪ್ ಬಣ್ಣಿಸಿದ್ದಾರೆ.