ಬೆಂಗಳೂರು,ಡಿ 17: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದ ಇಂದಿರಾ ಕ್ಯಾಂಟೀನ್ ಗೆ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ಮರುನಾಮಕರಣ ಮಾಡುವ ಬಗ್ಗೆ ಗಂಭೀರ ಚಿಂತನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಉದ್ದೇಶಿಸಲಾಗಿದೆ. ಇಂದಿರಾ ಕ್ಯಾಂಟೀನ್ ನ ಆಹಾರ, ಪೂರೈಕೆ, ವ್ಯವಸ್ಥೆ ಸರಿ ಇಲ್ಲ ಎಂಬ ಆರೋಪಗಳಿವೆ. ಇಂದಿರಾ ಕ್ಯಾಂಟೀನ್ ಗಳನ್ನು ಮತ್ತಷ್ಟು ಸುಧಾರಣೆ ಮಾಡಿ ಹೆಸರು ಬದಲಾವಣೆಗೆ ಚಿಂತನೆ ನಡೆದಿದೆ. ಬೆಂಗಳೂರು ನಗರ ವ್ಯಾಪ್ತಿ ತಮ್ಮ ಸುಪರ್ದಿಗೆ ಬರುವುದಿಲ್ಲ. ಬೆಂಗಳೂರು ಬಿಟ್ಟು ಹೊರ ಪ್ರದೇಶಗಳಲ್ಲಿ ಹೆಸರು ಬದಲಾವಣೆಗೆ ಗಂಭೀರ ಪರಿಶೀಲನೆ ನಡೆಯುತ್ತಿದೆ ಎಂದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ಪುನರ್ ನಾಮಕರಣ ಮಾಡುವಂತೆ ಮಾಜಿ ಸಚಿವ ರಾಜೂಗೌಡರು ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಪರಿಶೀಲಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಚರ್ಚಿಸಿ ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಸ್ಥಳಗಳಲ್ಲಿ ಹೆಸರು ಬದಲಾವಣೆ ಮಾಡಲು ಚಿಂತನೆ ಮಾಡಲಾಗುವುದು ಎಂದು ಅಶೋಕ್ ಹೇಳಿದರು.
ವೃದ್ಧಾಪ್ಯ ವೇತನ ಯೋಜನೆಯಲ್ಲಿ ಹಲವು ನಕಲಿ ಫಲಾನುಭವಿಗಳಿದ್ದು, ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ ಹಣ ನಷ್ಟವಾಗುತ್ತಿದೆ. ಹೀಗಾಗಿ ವೃದ್ಧಾಪ್ಯ ವೇತನ ಫಲಾನುಭವಿಗಳ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಆಧಾರ್ ಮಾಹಿತಿ ಆಧರಿಸಿ, 60 ವರ್ಷ ದಾಟಿದ ಅರ್ಹ ಫಲಾನುಭವಿಗಳಿಗೆ ಇಲಾಖೆಯಿಂದಲೇ ಪತ್ರ ಬರೆದು ನೀವು ವೃದ್ಧಾಪ್ಯ ವೇತನಕ್ಕೆ ಅರ್ಹರಾಗಿದ್ದೀರ ಎಂದು ಮಾಹಿತಿ ತಿಳಿಸುವ ವ್ಯವಸ್ಥೆಯನ್ನು ತರಲಾಗುತ್ತದೆ ಎಂದರು.
ಈಗಾಗಲೇ ಮೊದಲ ಕಂತಿನ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ಮುಂದಿನ ಕಂತನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ಮುಖ್ಯಮಂತ್ರಿ ಅವರು ಸದ್ಯದಲ್ಲೇ ದಹಲಿಗೆ ಹೋಗಲಿದ್ದು, ಆ ವೇಳೆ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಎರಡನೇ ಕಂತಿನ ನೆರೆ ಪರಿಹಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಅಶೋಕ್ ಹೇಳಿದರು.