ಆಂಕ್ಲೆಂಡ್, ಜ 25,ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮೊದಲನೇ ಟಿ-20 ಪಂದ್ಯದಲ್ಲಿ6 ವಿಕೆಟ್ ಗೆಲುವು ಸಾಧಿಸಿ ನ್ಯೂಜಿಲೆಂಡ್ ಪ್ರವಾಸ ಶುಭಾರಂಭ ಮಾಡಿರುವ ಬೆನ್ನಲ್ಲೆ ರಾಣಿ ರಾಂಪಾಲ್ ನಾಯಕತ್ವ ಭಾರತ ಮಹಿಳಾ ತಂಡವೂ ದ್ವೀಪ ರಾಷ್ಟ್ರದಲ್ಲಿ ಕಿವೀಸ್ ವಿರುದ್ಧ ಆರಂಭಿಕ ಹಣಾಹಣಿಯಲ್ಲಿ 4-0 ಅಂತರದಲ್ಲಿ ಗೆದ್ದು ಭರ್ಜರಿ ಆರಂಭ ಕಂಡಿದೆ. ಕೊಹ್ಲಿ ಪಡೆ ಹಾಗೂ ಭಾರತ ಮಹಿಳಾ ಹಾಕಿ ತಂಡ ಎರಡೂ ಮೊದಲನೇ ಪಂದ್ಯ ಆಡಿದ್ದು ಆಕ್ಲೆಂಡ್ ನಲ್ಲಿಯೇ ಎಂಬುದು ವಿಶೇಷ. ಕಳೆದ ಗುರುವಾರ ಆಕ್ಲೆಂಡ್ ಗೆ ಆಗಮಿಸಿದ್ದ ರಾಣಿರಾಂಪಾಲ್ ಪಡೆ, ನ್ಯೂಜಿಲೆಂಡ್ ವಿರುದ್ಧ ನಾಲ್ಕು ಪಂದ್ಯಗಳು ಹಾಗೂ ಗ್ರೇಟ್ ಬ್ರಿಟನ್ ವಿರುದ್ಧ ಏಕೈಕ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇಂದು ನಡೆದ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಮಹಿಳಾ ತಂಡದ ಪ್ರದರ್ಶನದಲ್ಲಿ ಸಾಕಷ್ಟು ಏರಿಳಿತಗಳು ಕಂಡವು. ಆದರೆ, ಮೂರನೇ ಕ್ವಾರ್ಟರ್ ನಲ್ಲಿ ನಾಯಕಿ ರಾಣಿ ರಾಂಪಾಲ್ ಅವರು ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಸತತವಾಗಿ ಸಿಕ್ಕ ಪೆನಾಲ್ಟಿ ಕಾರ್ನರ್ ಗಳಲ್ಲಿ ಭಾರತ ಗೋಲು ಗಳಿಸುವಲ್ಲಿ ವಿಫಲವಾಯಿತು.ನಾಲ್ಕನೇ ಕ್ವಾರ್ಟರ್ ನಲ್ಲಿ ಯುವ ಆಟಗಾರ್ತಿ ಶರ್ಮಿಳಾ ಅವರು ಭಾರತಕ್ಕೆ ಎರಡನೇ ಗೋಲು ತಂದುಕೊಟ್ಟರು. ಇದರ ಬೆನ್ನಲ್ಲೆ ನಾಯಕಿ ರಾಣಿ ತಮ್ಮ ಎರಡನೇ ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆ ತಂದುಕೊಟ್ಟರು. ನಮೀತಾ ಟೊಪ್ಪೊ ಭಾರತಕ್ಕೆ ನಾಲ್ಕನೇ ಗೋಲು ಕೊಡುಗೆಯಾಗಿ ನೀಡಿದರು.
"ಪಂದ್ಯದ ಆರಂಭದಲ್ಲಿ ನಾವು ಕೊಂಚ ಎಡವಿದೆವು. ನಂತರ, ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿ ಹಲವು ಗೋಲು ಗಳಿಸುವ ಅವಕಾಶಗಳನ್ನು ನಿರ್ಮಿಸಿದೆವು.,'' ಎಂದು ಪಂದ್ಯದ ಬಳಿಕ ಮುಖ್ಯ ಕೋಚ್ ಜೋರ್ಡ್ ಮರಿಜ್ನೆ ತಿಳಿಸಿದರು.ಕೊನೆಯ ಕ್ವಾರ್ಟರ್ ನಲ್ಲಿ ನ್ಯೂಜಿಲೆಂಡ್ ವನಿತೆಯರು ಸಾಕಷ್ಟು ಒತ್ತಡವನ್ನು ಪ್ರವಾಸಿ ತಂಡದ ಮೇಲೆ ಹೇರಿತು. ಆ ಮೂಲಕ ಗೋಲು ಗಳಿಸಲು ಪ್ರಯತ್ನ ನಡೆಸಿತು, ಆದರೆ, ಭಾರತ ರಕ್ಷಣಾ ಕೋಟೆಯನ್ನು ಭೇದಿಸಲು ಅವರ ಕೈಯಲ್ಲಿ ಸಾಧ್ಯವಾಗಲಿಲ್ಲ. "ಒಲಿಂಪಿಕ್ಸ್ ಕ್ರೀಡಾಕೂಟದ ರೀತಿ ನಾವು ಇಂದು 16 ಆಟಗಾರ್ತಿಯರೊಂದಿಗೆ ಆಡಿದೆವು. ಪ್ರತಿಯೊಂದು ಪಂದ್ಯದಲ್ಲಿಯೂ ಆಟಗಾರ್ತಿಯರನ್ನು ಬದಲಾವಣೆ ಮಾಡುತ್ತೇವೆ. ತೀವ್ರ ಒತ್ತಡದಲ್ಲಿ ಹೇಗೆ ತಂಡ ಸವಾಲು ಎದುರಿಸಲಿದೆ ಹಾಗೂ ತಮ್ಮ ಪ್ರದರ್ಶನದ ಆಧಾರದ ಮೇಲೆ ಬದಲಾವಣೆ ಅವಲಂಬಿಸಿರುತ್ತದೆ,'' ಎಂದರು.