ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಭಾರತ ಮಹತ್ವದ ಹೆಜ್ಜೆ

ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಭಾರತ ಮಹತ್ವದ ಹೆಜ್ಜೆ India takes a significant step towards achieving Sustainable Development Goals

ಗದಗ, 31: ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ಭಾರತ ನೀಡುತ್ತಿರುವ ಕೊಡುಗೆಗಳು ವಿಶ್ವಮಟ್ಟದಲ್ಲಿ ಗಮನಾರ್ಹವಾಗಿವೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಪರಿಣಾಮಕಾರಿ ಅನುಷ್ಠಾನದಿಂದ 248 ಮಿಲಿಯನ್ ಜನರು ಬಹುಮಟ್ಟಿನ ಬಡತನದಿಂದ ಹೊರಬಂದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಎ. ಕಂಬಾಳಿಮಠ ಹೇಳಿದರು.  

ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಸರ್ಕಾರಿ ಸಿ ವೃಂದದ ನೌಕರರು ಹಾಗೂ ಅಧಿಕಾರಿಗಳಿಗಾಗಿ ಜುಲೈ 30 ಮತ್ತು 31ರಂದು ಹಮ್ಮಿಕೊಂಡಿದ್ದ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.  

ಆಹಾರ ಭದ್ರತೆ, ಮೂಲ ಸೌಕರ್ಯಗಳ ಅಭಿವೃದ್ಧಿ, ಲಕ್ಷಾಂತರ ಜನರಿಗೆ ಉಚಿತ ಧಾನ್ಯ ವಿತರಣೆ, ಪೋಷಣಾ ಅಭಿಯಾನದ ಮೂಲಕ ಮಕ್ಕಳು ಹಾಗೂ ತಾಯಂದಿರ ಪೌಷ್ಟಿಕತೆ ಸುಧಾರಣೆ, ಆರೋಗ್ಯ ಮತ್ತು ಪೋಷಣಾ ಯೋಜನೆಗಳ ಮೂಲಕ ಬಡ ಕುಟುಂಬಗಳಿಗೆ ಆರೋಗ್ಯ ಸೇವೆಗಳ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳು ಸುಸ್ಥಿರ ಅಭಿವೃದ್ಧಿಗೆ ನೆರವಾಗುತ್ತಿವೆ ಎಂದು ತಿಳಿಸಿದರು.  

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ 20 ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾಧಿಕಾರಿ ಕಚೇರಿ ವ್ಯಾಪ್ತಿಯ ವಿವಿಧ ಇಲಾಖೆಗಳ 10ಕ್ಕೂ ಹೆಚ್ಚು ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಿ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಅರಿವು ಪಡೆದುಕೊಂಡರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಶ್ರೀಮತಿ ಜಯದೇವಿ ಅಡಕೇರಿಮಠ ಮಾತನಾಡಿ, ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಐತಿಹಾಸಿಕ ಪ್ರಗತಿ ಸಾಧಿಸಿದೆ ಎಂದರು.  

ಬಡತನ ನಿರ್ಮೂಲನೆ, ಆರೋಗ್ಯ ಸೇವೆಗಳ ವಿಸ್ತರಣೆ, ಶುದ್ಧ ಇಂಧನ ಬಳಕೆ, ಡಿಜಿಟಲ್ ಮೂಲಸೌಕರ್ಯ ಹಾಗೂ ಪರಿಸರ ಸಂರಕ್ಷಣೆಯಂತಹ ಕ್ರಮಗಳಿಂದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಇದು ಸಮಾನತೆ, ಸಮೃದ್ಧಿ ಮತ್ತು ಹಸಿರು ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.  

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಮಾತನಾಡಿ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಮೂಲಕ ಶುದ್ಧ ಇಂಧನ ಬಳಕೆ, ಪಿಎಂ-ಕುಸುಮ್ ಯೋಜನೆಯಡಿ ರೈತರಿಗೆ ಸೌರಶಕ್ತಿ ಆಧಾರಿತ ಪಂಪ್ಗಳ ಒದಗಣೆ, ಪಿಎಂ ಸೂರ್ಯ ಘರ್ ಮುಫ್ತ್‌ ಬಿಜ್ಲಿ ಯೋಜನೆಯ ಮೂಲಕ ಮನೆಮನೆಗೆ ಸೌರ ವಿದ್ಯುತ್ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.  

ಎಸ್ಡಿಜಿ ಇಂಡಿಯಾ ಇಂಡೆಕ್ಸ್‌ ವರದಿ ಮೂಲಕ ರಾಜ್ಯಗಳ ಪ್ರಗತಿಯನ್ನು ಅಳೆಯಲಾಗುತ್ತಿದೆ. ಅರಣ್ಯ, ಜಲಾಶಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಮುದಾಯ ಆಧಾರಿತ ಪ್ರಯತ್ನಗಳಿಂದ ಹವಾಮಾನ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಬಿ. ಮಡೂರು ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಜನಸಾಮಾನ್ಯರು, ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದರು.  

2030ರ ವೇಳೆಗೆ ನೀರೀಕ್ಷಿತ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಅಗತ್ಯವಾದ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಪೂರ್ವ ನೀರೀಕ್ಷಿತ ಸಾಧನೆಗಳನ್ನು ತಲುಪುವ ವಿಶ್ವಾಸವಿದೆ ಎಂದು ಉಪ ಪ್ರಾಚಾರ್ಯ ಐ.ಜೆ. ಪಾಪಣ್ಣ ಹೇಳಿದರು.  

ತರಬೇತಿ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಕರ್ನಾಟಕ ಕೇಂದ್ರ ಹಾಗೂ ಆಡಳಿತ ತರಬೇತಿ ಸಂಸ್ಥೆ ಮೈಸೂರಿನ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿದ್ಧರಾಮ ಹೆಚ್‌.ಎಂ. ಅವರು ವಿಶೇಷ ಉಪನ್ಯಾಸ ನೀಡಿದರು. ಬೋಧಕರಾದ ಎಸ್‌.ಎಂ. ಸುಣಗಾರ ಮತ್ತು ಶ್ರೀಮತಿ ಆರ್‌.ಎಂ. ಹರಿಜನ ಅವರು ತರಬೇತಿ ನೀಡಿದರು.  ಕಾರ್ಯಾಗಾರದಲ್ಲಿ ಕಚೇರಿ ಸಿಬ್ಬಂದಿಗಳಾದ ಮಂಜುನಾಥ ಪತ್ತಾರ, ಶಂಕರ್ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.