ಟ್ರಿನಿಡಾಡ್, ಆ 3 ಕನ್ನಡಿಗ ಕೆ. ಗೌತಮ್ (17 ಕ್ಕೆ 5) ಅವರ ಸ್ಪಿನ್ ಮೋಡಿ ಹಾಗೂ ಪ್ರಿಯಾಂಕ್ ಪಾಂಚಲ್ (68 ರನ್, 121 ಎಸೆತಗಳು) ಹಾಗೂ ಮಯಾಂಕ್ ಅಗರವಾಲ್ (81 ರನ್, 134 ಎಸೆತಗಳು) ಅವರ ಅರ್ಧ ಶತಕಗಳ ನೆರವಿನಿಂದ ಭಾರತ (ಎ) ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್(ಎ) ವಿರುದ್ಧ ಗೆಲುವಿನ ಸನಿಹದಲ್ಲಿದೆ.
ಇಲ್ಲಿನ ಕ್ವೀನ್ಸ್ ಪಾರ್ಕ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 12 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್(ಎ) 39.5 ಓವರ್ಗಳಲ್ಲಿ 149 ರನ್ಗಳಿಗೆ ಕುಸಿಯಿತು. ಬಳಿಕ 278 ರನ್ ಗುರಿ ಬೆನ್ನತ್ತಿದ್ದ ಭಾರತ ಮೂರನೇ ದಿನದಾಟ ಮುಕ್ತಾಯಕ್ಕೆ 50 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 185 ರನ್ ಗಳಿಸಿದೆ. ಇನ್ನೂ ಭಾರತ (ಎ)ದ ಗೆಲುವಿಗೆ 93 ರನ್ ಅಗತ್ಯವಿದೆ.
278 ರನ್ ಗುರಿ ಹಿಂಬಾಲಿಸಿದ ಭಾರತ(ಎ) ಗೆ ಆರಂಭಿಕರಾದ ಪ್ರಿಯಾಂಕ್ ಪಾಂಚಲ್ ಹಾಗೂ ಮಯಾಂಕ್ ಅಗರವಾಲ್ ಜೋಡಿಯು ಅತ್ಯುತ್ತಮ ಆರಂಭ ನೀಡಿತು. ಮೊದಲ ಇನಿಂಗ್ಸ್ನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡ ಈ ಜೋಡಿ, ಆರಂಭದಿಂದಲೂ ಬಹಳ ಎಚ್ಚರಕೆಯಿಂದ ಬ್ಯಾಟಿಂಗ್ ಮಾಡಿತು. ಈ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ 150 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿತು. ಮೊದಲ ಇನಿಂಗ್ಸ್ನ ಬ್ಯಾಟಿಂಗ್ ಲಯ ಮುಂದುವರಿಸಿದ ಪಾಂಚಲ್ ಅವರು ಅಮೋಘ ಬ್ಯಾಟಿಂಗ್ ಮಾಡಿದರು. 121 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳೊಂದಿಗೆ 68 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಅದ್ಭುತ ಬ್ಯಾಟಿಂಗ್ ಮಾಡಿದ ಕನ್ನಡಿಗ ಮಯಾಂಕ್ ಅಗರವಾಲ್ ವಿಂಡೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಎದುರಿಸಿದ 134 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ 81 ರನ್ ಗಳಿಸಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ನಂತರ ಶತಕದಂಚಿನಲ್ಲಿ ಮುನ್ನುಗ್ಗುತ್ತಿದ್ದ ಅವರನ್ನು ಚೆಮರ್ ಕಟ್ಟಿ ಹಾಕಿದರು. ನಂತರ, ಇವರ ಹಿಂದೆಯೇ ಹನುಮ ವಿಹಾರಿ(1) ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ಗೆ ನಡೆದರು.
ಇದೀಗ ಕ್ರೀಸ್ನಲ್ಲಿ ಅಭಿಮನ್ಯೂ ಈಶ್ವರನ್(16 *) ಹಾಗೂ ಅನ್ಮೋಲ್ಪ್ರೀತ್ ಸಿಂಗ್(4*ರನ್) ಅವರು ವಿಕೆಟ್ ಕಾಯ್ದುಕೊಂಡಿದ್ದಾರೆ. ಇನ್ನೂ ಭಾರತಕ್ಕೆ 93 ರನ್ ಅಗತ್ಯವಿದ್ದು, ಇನ್ನೂ ಕೈಯಲ್ಲಿ ಏಳು ವಿಕೆಟ್ ಇದೆ.
ಇದಕ್ಕೂ ಮೊದಲು ನಾಲ್ಕು ವಿಕೆಟ್ ಕಳೆದುಕೊಂಡು 12 ರನ್ಗಳಿಂದ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ಪರ ಸುನೀಲ್ ಅಂಬ್ರಿಸ್ ಹಾಗೂ ಜರ್ಮನ್ ಬ್ಲಾಕ್ವುಡ್ ಜೋಡಿಯು ತಂಡಕ್ಕೆ ಆಸರೆಯಾಯಿತು. ಈ ಜೋಡಿಯು ಮುರಿಯದ ಐದನೇ ವಿಕೆಟ್ಗೆ 65 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು.
ಮಧ್ಯಮ ಕ್ರಮಾಂಕದಲ್ಲಿ ಕೆಲ ಕಾಲ ಉತ್ತಮ ಬ್ಯಾಟಿಂಗ್ ಮಾಡಿದ್ದ ಬ್ಲಾಕ್ವುಡ್ 41 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಎರಡು ಬೌಂಡರಿಯೊಂದಿಗೆ 31 ರನ್ ಗಳಿಸಿದರು. ನಂತರ ಅವರು ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು. ಅದ್ಭುತ ಬ್ಯಾಟಿಂಗ್ ಮಾಡಿದ ಸುನೀಲ್ ಅಂಬ್ರೀಸ್ ಏಕಾಂಗಿ ಹೋರಾಟ ನಡೆಸಿದರು. ಒಬ್ಬರೇ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡಿದ್ದರು. 93 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿಯೊಂದಿಗೆ 71 ರನ್ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು. ಆದರೆ, ಇವರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಕೆ. ಗೌತಮ್ ಬಿಡಲಿಲ್ಲ.
ಒಟ್ಟಾರೆ, ದ್ವಿತೀಯ ಇನಿಂಗ್ಸ್ನಲ್ಲಿ 149 ರನ್ ಗಳಿಗೆ ಕುಸಿಯಿತು. ಆದರೆ, ಮೊದಲ ಇನಿಂಗ್ಸ್ ಮುನ್ನಡೆಯ ಫಲವಾಗಿ ಭಾರತ(ಎ)ಗೆ ಸ್ಪರ್ದಾತ್ಮಕ ಗುರಿ ನೀಡಿತು. ಅತ್ಯುತ್ತಮ ಬೌಲಿಂಗ್ ಮಾಡಿದ ಕೆ.ಗೌತಮ್ ಐದು ವಿಕೆಟ್ ಗೊಂಚಲು ಪಡೆದು ವಿಂಡೀಸ್ ಕುಸಿತಕ್ಕೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್(ಎ)
ಪ್ರಥಮ ಇನಿಂಗ್ಸ್: 318
ದ್ವಿತೀಯ ಇನಿಂಗ್ಸ್: 149 (39.5)
ಸುನೀಲ್ ಅಂಬ್ರಿಸ್ -71
ಜರ್ಮನ್ ಬ್ಲಾಕ್ವುಡ್-31
ಬೌಲಿಂಗ್: ಕೆ.ಗೌತಮ್ 17 ಕ್ಕೆ 5, ಸಂದೀಪ್ ವಾರಿಯರ್ 43 ಕ್ಕೆ 3
ಭಾರತ(ಎ)
ಪ್ರಥಮ ಇನಿಂಗ್ಸ್: 190
ದ್ವಿತೀಯ ಇನಿಂಗ್ಸ್: 185/3 (50)
ಮಯಾಂಕ್ ಅಗರವಾಲ್-81
ಪ್ರಿಯಾಂಕ್ ಪಾಂಚಲ್-68
ಬೌಲಿಂಗ್: ಚೆಮರ್ ಹೋಲ್ಡರ್ 34 ಕ್ಕೆ 2, ರೇಮನ್ ರಿಫರ್ 44 ಕ್ಕೆ 1