ಹಾವೇರಿ 22: ವಿಶ್ವವೇ ಭಾರತದತ್ತ ಮುಖಮಾಡುವಂತಾಗಿದ್ದು, ಭಾರತದ ಆಧ್ಯಾತ್ಮ ಪರಂಪರೆ ವೃಷ್ಠಿ ಸಮಷ್ಠಿಗಳನ್ನು ಏಕತ್ರಗೊಳಿಸುವ ರಾಜಮಾರ್ಗ ಭಾರತೀಯ ಸಂಸ್ಕೃತಿಯಾಗಿದೆ. ಇಂಥಹ ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆಯು ವಿಶ್ವಕ್ಕೆ ಮಾದರಿಯಾಗಿದೆ ಎಂದು ಉಜ್ಜಯನಿ ಸದ್ಧರ್ಮಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಉಜ್ಜಯನಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಮತ್ತು ಭಾವೈಕ್ಯತಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕೃಷಿ ಸಂಸ್ಕೃತಿಯೇ ಎಲ್ಲಾ ನಾಗರೀಕತೆಗಳ ಮೂಲವಾಗಿದೆ. ಸರಕಾರಗಳು ರೈತರ ಬಗ್ಗೆ ನಿರ್ಲಕ್ಷ ಧೋರಣೆಯನ್ನು ತಾಳುತ್ತಿವೆ. ಒಂದು ಅರ್ಥವ್ಯವಸ್ಥೆಯಲ್ಲಿ ಎಲ್ಲ ಉತ್ಪನ್ನಗಳನ್ನು ತಯಾರಿಸುವವರು, ಸೇವೆ ನೀಡುವವರು ಅವರೇ ಬೆಲೆಯನ್ನು ನಿರ್ಧರಿಸುವ ಶಾಸನ ಜಾರಿಗೆ ಬರಬೇಕು. ರೈತರೇ ಇಲ್ಲದೇ ಇರುವ ಪರಿಸ್ಥಿತಿ ಬಂದರೆ ಜಗತ್ತಿನ ಅಂತ್ಯ ಅಂದೇ ಆಗುತ್ತದೆ. ರೈತಪರ ಸಂಘಟನೆಗಳು ರಾಜಕೀಯ ಬದಿಗೊತ್ತಿ ಅನ್ನದಾತರ ಕಷ್ಟಕ್ಕೆ ದ್ವನಿಯಾಗಬೇಕು ಎಂದು ಹೇಳಿದರು.
ಭೂಮಿತಾಯಿ ಸಕಲ ಜೀವರಾಶಿಗಳಿಗೂ ಆಶ್ರಯದಾತೆ. ನಮ್ಮ ಜಗತಿನ ಎಲ್ಲ ವ್ಯವಹಾರಗಳು ನಡೆಯುವದು ಇಲ್ಲಿಯೇ, ಭೂಮಿತಾಯಿಗಿಂತ ಮಿಗಿಲಾದ ದೈವವಿಲ್ಲ. ಆದ್ದರಿಂದ ಭೂಮಿಯನ್ನು ಮಾತೃಭೂಮಿ ಎಂದು ಕರೆಯುವದು. ಈ ಮಾತೃಭೂಮಿ ಕಲುಷಿತವಾಗುವದು ಎಂದರೆ ನಮ್ಮ ಜೀವನವನ್ನೇ ನಾವೇ ಹಾಳು ಮಾಡಿದಂತಾಗುತ್ತದೆ ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಇಂದು ಐಶಾರಾಮಿ ಬದುಕನ್ನು ಸಾಗಿಸುತ್ತಿದ್ದಾನೆ. ಅದಕ್ಕೆ ಬೇಕಾದ ಎಲ್ಲಾ ಸೌಕರ್ಯಗಳು ಇವೆ. ಆದರೆ ಭೌತಿಕವಾಗಿ ಶ್ರೀಮಂತರಾದರೂ ಮಾನಸಿಕವಾಗಿ ಬಡವರಾಗಿದ್ದಾರೆ. ಧಾರ್ಮಿಕ ಸಭೆ ಸಮಾರಂಭಗಳು ನಮ್ಮನ್ನು ಮಾನಸಿಕವಾಗಿ ಸದೃಡವಾಗಿಸುತ್ತವೆ. ಜೀವಜಂಜಾಟದಿಂದ ಮುಕ್ತನಾಗಲು ಇಷ್ಟಲಿಂಗ ಪೂಜಾ ಅನುಷ್ಠಾನ ಅತೀ ಅವಶ್ಯವಾಗಿದೆ. ಜಗದ್ಗುರುಗಳು ನಡೆಸಿಕೊಡುವ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಗಣ್ಯ ವರ್ತಕ ಪಿ.ಡಿ. ಶಿರೂರ ಮಾತನಾಡಿ, ಹಾವೇರಿ ಮರಿಕಲ್ಯಾಣ ಎಂದು ಪ್ರಖ್ಯಾತ ಪಡಿದಿದೆ. ವೀರಶೈವ ಸಮಾಜವು ಬಹುಸಂಖ್ಯಾತರಾಗಿದ್ದಾರೆ. ಆದರೆ ಉಪಪಂಗಡಗಳ ಹೆಸರಲ್ಲಿ ಸಮಾಜವು ವಿಘಟನೆಯಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೋಲ್ಳುವಂತಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಒಗ್ಗಟ್ಟನ್ನು ತರವ ಕೆಲಸಮಾಡುತ್ತವೆ. ಎಲ್ಲರೂ ಇಂಥ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು. ಭಕ್ತರೆಂದರೆ ಹಾವೇರಿ ಭಕ್ತರು ಎಂಬ ಮಾತು ನಿಜವಾಗಬೇಕು. ಮರಿಕಲ್ಯಾಣ ಎಂಬ ಹೆಸರು ಉಳಿಯಬೇಕು ಎಂದು ಹೇಳಿದರು.
ಹಿರೇಬಾಸೂರಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಪುಷ್ಪಾ ಶಲವಡಿಮಠ ಮಾತನಾಡಿ, ಮಾನುಷ್ಯನಿಗೆ ಇಂದು ಸಂಸ್ಕಾರ ಅತೀ ಅವಶ್ಯಕವಾಗಿದೆ. ಹಾಲಿಗೆ ಸಂಸ್ಕಾರ ಕೊಟ್ಟಾಗ ಮೊಸರು, ಮಜ್ಜಿಗೆ, ಬೆಣ್ಣೆ, ಹಾಗೂ ತುಪ್ಪ ಆಗುವ ಹಾಗೆ, ಮಾನವನಿಗೆ ಧಾರ್ಮಿಕ ಸಂಸ್ಕಾರ ಇಂಥ ಲಿಂಗಾನುಷ್ಠಾನ ಕಾರ್ಯಕ್ರಮದ ಮೂಲಕ ಸಿಗುತ್ತದೆ. ಧಾರ್ಮಿಕ ಸಂಸ್ಕಾರದಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಹಿರೇಮಠ, ಉಮೇಶ ಹತ್ತಿಮತ್ತೂರ, ನಾಗರಾಜ ಕೂಸನೂರ, ಸಂತೋಷ ಹಿರೇಮಠ, ಶಂಭುಲಿಂಗ ಅಗಡಿ, ಕಲ್ಲಪ್ಪ ಮೆಣಸಿನಹಾಳ ಮತ್ತಿತರರು ಉಪಸ್ಥಿತರಿದ್ದರು. ಅಕ್ಕಮಹಾದೇವಿ ಭರತನೂರಮಠ ಪ್ರಾರ್ಥಿಸಿದರು. ತಮ್ಮಣ್ಣ ಮುದ್ದಿ ಸ್ವಾಗತಿಸಿದರು. ಹನುಮಂತಗೌಡ ಗೊಲ್ಲರ ಕಾರ್ಯಕ್ರಮ ನಿರೂಪಿಸಿದರು. ವಿರೂಪಾಕ್ಷಪ್ಪ ಹತ್ತಿಮತ್ತೂರ ವಂದಿಸಿದರು.