ಸಾಮಾಜಿಕ ಅಂತರದೊಂದಿಗೆ ಸ್ವಾತಂತ್ರೋತ್ಸ ಆಚರಣೆ

ಸಾಮಾಜಿಕ ಅಂತರದೊಂದಿಗೆ 74ನೇ ಸ್ವಾತಂತ್ರ್ಯೋತ್ಸವ: ಜಿಲ್ಲಾಧಿಕಾರಿ ಹರೀಶ್ ಕುಮಾರ್

ಕಾರವಾರ, ಆಗಸ್ಟ್ 3: ಬರುವ ಅಗಸ್ಟ್ 15ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವವನ್ನು ಸಾಮಾಜಿಕ ಅಂತರ ಸ್ವಾನಿಟೈಸರ್, ಮಾಸ್ಕಗಳ  ಬಳಕೆಯಂತಹ ನಿಯಮದೊಂದಿಗೆ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್  ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್-19 ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಪ್ರಸಕ್ತ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಕುರಿತು ಕೇಂದ್ರ ಸರ್ಕಾರವು ಕೆಲವು ಮಾರ್ಗದರ್ಶನಗಳನ್ನು ನೀಡಿದೆ. ಈ ಮಾರ್ಗದರ್ಶನದ ಪ್ರಕಾರ ಜಿಲ್ಲಾಮಟ್ಟದಲ್ಲಿ ಪರೇಡ್,  ರಾಷ್ಟ್ರಧ್ವಜಾರೋಹಣ, ಜಿಲ್ಲಾ ಉಸ್ತುವಾರಿ ಸಚಿವರಿಂದ ಭಾಷಣ ಹಾಗೂ ಮತ್ತಿತರ ವಿಧಿ ವಿಧಾಯಕ ಕಾರ್ಯಕ್ರಮಗಳ ಮೂಲಕ ಕಡಿಮೆ ಸಂಖ್ಯೆಯಲ್ಲಿ ಜನಸೇರಿ ರಾಷ್ಟ್ರ ಧ್ವಜಕ್ಕೆ ಗೌರವವನ್ನು ಸಲ್ಲಿಸಬೇಕು. ಯಾವುದೇ ರೀತಿಯಿಂದಲೂ ಚ್ಯುತಿಬಾರದಂತೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಬೇಕೆಂದರು. 

     ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ವರ್ಷ ಶಾಲಾ-ಕಾಲೇಜು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥಸಂಚಲನ ಇರುವುದಿಲ್ಲ. ಕೇವಲ ಪೊಲೀಸ್, ಗೃಹ ರಕ್ಷಕದಳ, ಅರಣ್ಯ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ನಾಲ್ಕು ತಂಡಗಳಿಂದ ಮಾತ್ರ ಪಥಸಂಚಲನ ನಡೆಯಬೇಕು ಎಂದರು.

ಸರ್ಕಾರದ ಮಾರ್ಗಸೂಚಿ ಅನ್ವಯ ಬೆಳಗ್ಗೆ 7:15ಕ್ಕೆ ಜಿಲ್ಲಾಧಿಕಾರಿ ಗೃಹ ಕಚೇರಿಯಲ್ಲಿ, 7:30ಕ್ಕೆ ಎಲ್ಲಾ ಶಾಲಾ-ಕಾಲೇಜು ಸರ್ಕಾರಿ ಕಚೇರಿಗಳಲ್ಲಿ, 8:15ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, 9 ಗಂಟೆಗೆ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಅಚ್ಚುಕಟ್ಟಾಗಿ ಧ್ವಜಾರೋಹಣ ನೆರವೇರಬೇಕೆಂದು ತಿಳಿಸಿದರು.

ಈ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು, ಆರೋಗ್ಯ ಇಲಾಖೆ, ಸರ್ಕಾರಿ ವೈದ್ಯರು, ನರ್ಸಗಳು, ಪಿಡಿಒ, ಪೌರಕಾರ್ಮಿಕರು ಮತ್ತೀತರ ಸೇವೆಗಳಲ್ಲಿ ತೊಡಗಿಕೊಂಡಿರುವ ಕೋರೋನಾ ವಾರಿಯರ್ಸಗಳನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಗುರುತಿಸಿ ಅವರಲ್ಲೊಬ್ಬರನ್ನು ಪ್ರತಿನಿಧಿಯನ್ನಾಗಿ ಗೌರವಿಸಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.