ದೈವನಾಮಸ್ಮರಣೆಯಿಂದ ದೈವಶಕ್ತಿ ವೃದ್ಧಿಸಿಕೊಳ್ಳಿ; ದುಷ್ಟ ಶಕ್ತಿಗಳಿಂದ ಧರ್ಮ, ದೇಶ ರಕ್ಷಿಸಿ: ನಾರನಗೌಡ ಉತ್ತಂಗಿ
Increase your divine power by chanting the divine name; protect religion and country from evil force
ಮಹಾಲಿಂಗಪುರ 09 : ಒಬ್ಬ ಸದ್ಗುಣಿ ಮಾತೆಯ ಪುಣ್ಯ ಗರ್ಭದಿಂದ ಅವತರಿಸಿದ ಸಂಜಾತರಿಂದ ಸ್ವಸ್ಥ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಸಾಧ್ಯ ಹಾಗಾಗಿ ಒಂದು ಕುಟುಂಬ, ಸಮಾಜ, ದೇಶದ ಸದೃಢತೆ ಮಹಿಳೆಯನ್ನು ಅವಲಂಬಿಸಿರುತ್ತದೆ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು. ಸ್ಥಳೀಯ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ರವಿವಾರ ಸಂಜೆ ನಂದಾದೀಪ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಭಾರತ ಮತ್ತು ಹಿಂದೂ ಧರ್ಮ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವ ಪ್ರಸ್ತುತ ಸನ್ನಿವೇಶದಲ್ಲಿ ಮಾತೆಯರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಕಾಳಿ, ದುರ್ಗೆ,ಆದಿಶಕ್ತಿ ಸ್ವರೂಪರಾದ ಮಾತೆಯರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಮೊಬೈಲ್, ಟಿವಿ ಗೀಳಿನಿಂದ ಹೊರಬಂದು ತಮ್ಮ ಕುಟುಂಬ ಮತ್ತು ತಮ್ಮ ಮಕ್ಕಳಿಗೆ ಸನಾತನ ಸಂಸ್ಕೃತಿ ಸಂಪ್ರದಾಯಗಳ ಮಹತ್ವದ ಅರಿವು ಮೂಡಿಸಬೇಕಾಗಿದೆ. ಮಕ್ಕಳಿಗೆ ಧರ್ಮದ ಶ್ರೇಷ್ಠತೆ ಮತ್ತು ಆಚರಣೆಯ ಮಹತ್ವದ ಮನವರಿಕೆ ಮಾಡಿ ಅಭಿಮಾನ ಮೂಡಿಸಬೇಕಾಗಿದೆ.
ಸೀತಾಪಹರಣದ ಸಂದರ್ಭದಲ್ಲಿವಿಷ್ಣುವಿನ ಅವತಾರವಾದ ಶ್ರೀ ರಾಮಚಂದ್ರನಿಗೆ ತಮ್ಮ ದೈವಶಕ್ತಿಯಿಂದ ಕ್ಷಣಮಾತ್ರದಲ್ಲಿ ಸೇತುವೆ ನಿರ್ಮಿಸುವುದು ದೊಡ್ಡ ಮಾತಾಗಿರಲಿಲ್ಲ ಆದರೂ ಸಹ ಶ್ರೇಷ್ಠ ಶಿವಭಕ್ತನಾದ ರಾವಣನನ್ನು ಎದುರಿಸಲು ಇಡೀ ಕಪಿ ಸೈನ್ಯದ ದೈವ ಶಕ್ತಿ ವೃದ್ಧಿಸುವ ಸಲುವಾಗಿ ಪ್ರತಿ ಕಲ್ಲಿನ ಮೇಲೆ ಜೈ ಶ್ರೀ ರಾಮ್ ಮತ್ತು ಅದನ್ನು ಎಸೆಯುವಾಗಲೂ ಜೈ ಶ್ರೀ ರಾಮ್ ಎಂಬ ನಾಮ ಸ್ಮರಣೆಯಿಂದ ಇಡೀ ಕಪಿ ಸೈನ್ಯಕ್ಕೆ ದೈವ ಶಕ್ತಿ ವೃದ್ಧಿಯಾಗಿ ರಾವಣನನ್ನು ಗೆಲ್ಲಲು ಸುಲಭವಾಯಿತು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ಮಾತೆಯರು ದೈವಶಕ್ತಿ ವೃದ್ಧಿಗಾಗಿ ಕುಲದೈವ ಮತ್ತು ಇಷ್ಟದೈವದ ನಾಮಸ್ಮರಣೆ ಮಾಡಬೇಕಾಗಿದೆ, ಮಕ್ಕಳಿಗೂ ನಮ್ಮ ಸಂಸ್ಕೃತಿಯ ಸಂಪ್ರದಾಯದ ಆಚರಣೆಗಳನ್ನು ಆಚರಿಸಲು ತಿಳಿಸಿಕೊಡಬೇಕಾಗಿದೆ, ಕುಂಕುಮ, ನಾಮ, ವಿಭೂತಿ, ಕೈಬಳೆ, ಕಾಲ್ಗೆಜ್ಜೆ, ಕಿವಿಯೋಲೆ ಧರಿಸುವುದು, ಹೂ ಮುಡಿಯುವುದು, ಸಭ್ಯ ವಸ್ತ್ರಗಳನ್ನು ಧರಿಸುವುದು, ಗುರುಹಿರಿಯರಿಗೆ ನಮಸ್ಕರಿಸುವುದು ಸೇರಿದಂತೆ ಸರ್ವರನ್ನು ಪ್ರೀತಿಸುವುದು ಹಾಗೂ ನಾಮಸ್ಮರಣೆ ಕಲಿಸಬೇಕಾಗಿದೆ.
ಮೆಕಾಲೆ ಹೇಳಿದಂತೆ ಭಾರತದ ಸ್ವಾತಂತ್ರ್ಯ ನಂತರದ 80 ವರ್ಷಗಳಲ್ಲಿ ಅಲ್ಲಿನ ಜನ ರಕ್ತ ಮತ್ತು ಮಾಂಸದಲ್ಲಿ ಮಾತ್ರ ಭಾರತೀಯರಾಗಿರುತ್ತಾರೆ ಉಳಿದೆಲ್ಲವೂ ಪಾಶ್ಚ್ಯತ್ತರಾಗಿರುತ್ತಾರೆ ಎಂಬ ಮಾತು ಈಗ ಸತ್ಯವಾಗುವ ಸನ್ನಿವೇಶದಲ್ಲಿದ್ದೇವೆ. ಒಂದು ವೇಳೆ ಹಾಗಾದರೆ ಭಾರತೀಯ ಹಿಂದುಗಳಾದ ನಮಗೆ ಮುಂಬರುವ ದಿನಗಳಲ್ಲಿ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರವೇ ಗತಿಯಾಗುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಸಾಲುಮರದ ತಿಮ್ಮಕ್ಕ, ಓಬವ್ವ, ಚೆನ್ನಮ್ಮ ನೀರಾ ಆರ್ಯ, ಅಹಲ್ಯಾದೇವಿ ಹೋಳ್ಕರ್ ರಂತೆ ಸೇವಾ ಕಾರ್ಯದಿಂದ ಧರ್ಮ, ದೇಶದ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು.
ಶಿಕ್ಷಕ ಐ.ಎಸ್. ಪಾಟೀಲ ಮಾತನಾಡಿ, ದೇಶದ ಹೆಸರಲ್ಲಿ, ನದಿಗಳ ಹೆಸರಲ್ಲಿ, ಭೂತಾಯಿ ಹೆಸರಲ್ಲಿ ಮಾತೆಯನ್ನು ಕಂಡ ದೇಶ ಭಾರತ. ಮಹಿಳೆಯರು ಎಚ್ಚೆತ್ತಾಗ ಮಾತ್ರ ದೇಶ ಉಳಿಸಲು ಸಾಧ್ಯ, ಮಹಿಳೆ ಸೌಜನ್ಯ, ಸಂಸ್ಕಾರದ ಸಂಕೇತ, ಕುಟುಂಬದ ಆಧಾರ ಸ್ತಂಭ, ಸಹನಾಮೂರ್ತಿ, ಕ್ಷಮಯಾಧರಿತ್ರಿ ಎಂದರು. ಮಹಿಳಾಪರ ಚಿಂತಕರಾದ ಕಲ್ಪನಾ ಬರಗಿ, ಕವಿತಾ ಕೊಣ್ಣೂರ ಮಾತನಾಡಿದರು. ವಿವೇಕಾನಂದ ಬಡಾವಣೆಯ ಮಹಿಳೆಯರನ್ನು ಯಾವುದೇ ಕೆಲಸಕ್ಕೂ ಹಚ್ಚದೆ ಬಡಾವಣೆಯ ಶಿಕ್ಷಕರು, ಪುರುಷರೇ ಅಡುಗೆ ತಯಾರಿಸಿ, ವೇದಿಕೆ ಸಿದ್ಧಪಡಿಸಿ ಮಹಿಳಾ ದಿನಾಚರಣೆ ಆಚರಿಸಿದ್ದು ವಿಶೇಷವಾಗಿತ್ತು. ನೂರಾರು ಮಹಿಳೆಯರು ಕೇಸರಿ ಸೀರೆ ಧರಿಸಿ ಗಮನ ಸೆಳೆದರು. ನಂದಾದೀಪ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರೇಮಾ ಸಿಂಪಿಗೇರ ಅಧ್ಯಕ್ಷತೆ ವಹಿಸಿ, ಉಪಾಧ್ಯಕ್ಷೆ ಭಾರತಿ ಸುಲಾಖೆ, ಕಲಾವತಿ ಅಮಲಝರಿ, ಅಡವೇಶ ಮಹಾರಾಜರು ಉಪಸ್ಥಿತರಿದ್ದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಏರಿ್ಡಸಿದ್ದ ಬಲೂನ್ ಆಟದಲ್ಲಿ ಅಕ್ಕವ್ವ ಮಡ್ಡೆನ್ನವರ ಪ್ರಥಮ, ಅನಿತಾ ತೋಟಗೇರ ದ್ವಿತೀಯ, ಜಯಶ್ರೀ ಪಟ್ಟಣಶೆಟ್ಟಿ ತೃತೀಯ ಸ್ಥಾನ ಪಡೆದರು. ಶಾಂತ ಚಿನವಾಲ ಪ್ರಾರ್ಥಿಸಿ, ಮುಖ್ಯೋಪಾಧ್ಯಾಯ ಎಸ್.ಎಂ.ಮುಗುಳಖೋಡ ನಿರೂಪಿಸಿ, ಶಿಕ್ಷಕ ಎಲ್.ಎಸ್.ನಾಗಣ್ಣವರ ಬಹುಮಾನ ವಿತರಿಸಿ, ಶಿಕ್ಷಕ ಗೌಡಪ್ಪನವರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 