ಧಾರವಾಡ 08: ಇಂದಿನ ಯುವ ಜನಾಂಗ ಮಾದಕ ವಸ್ತುಗಳ ಜಾಲದಲ್ಲಿ ಸಿಲುಕಿ ಸಣ್ಣ ವಯಸ್ಸಿನಲ್ಲಿಯೇ ಅಪರಾಧ ಜಗತ್ತಿಗೆ ಕಾಲಿಡುತ್ತಿದೆ. ಇದು ಆಘಾತಕಾರಿ ವಿಷಯ. ಹೆತ್ತವರ ನಿರ್ಲಕ್ಷ ಅನಾಯಾಸವಾಗಿ ದೊರೆಯುವ ಹಣ ಯುವ ಸಮೂಹವನ್ನು ಈ ಮಾದಕ ದ್ರವ್ಯಗಳ ಜಗತ್ತಿಗೆ ಕಾಲಿಡಲು ಕಾರಣಿಭೂತವಾಗಿದೆ. ಪಾಲಕರು, ಶಿಕ್ಷಕರು ಪೊಲೀಸರು ಜಂಟೀಯಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಉಪ ಪೋಲಿಸ್ ಆಯುಕ್ತರಾದ ರುದ್ರಪ್ಪರವರು ಹೇಳಿದರು.
ಅವರು ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳನ್ನು ಸೇವಿಸದೇ ಇರುವುದಲ್ಲದೇ ನಿಮ್ಮ ಪ್ರದೇಶದಲ್ಲಿ ಆ ರೀತಿ ಯಾವುದಾದರೂ ಚಟುವಟಿಕೆ ನಡೆಯುತ್ತಿದ್ದರೆ ಪೋಲಿಸರ ಗಮನಕ್ಕೆ ತನ್ನಿ ಎಂದು ಕಿವಿ ಮಾತು ಹೇಳಿದರು.
ಮಾದಕ ವಸ್ತುಗಳ ಸೇವನೆ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಅನಿಷ್ಠ ಪರಿಣಾಮ ಬೀರುತ್ತದೆ. ಎಲ್ಲ ಅಭಿವೃದ್ಧಿ ಪರ ಕಾರ್ಯಗಳಿಗೆ ಇದು ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಮಧ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಮೂಲಕ ಲಕ್ಷಾಂತರ ಕುಟುಂಬಗಳನ್ನು ವಿಷ ವರ್ತುಲದಿಂದ ಹೊರ ತಂದಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ಜಿಲ್ಲಾ ಸದಸ್ಯರಾದ ಮಹಾವೀರ ಉಪಾದ್ಯೆ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ವಲಯ ಅಧಿಕಾರಿ ಉಲ್ಲಾಸ ಮೆಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು "ನಶೆಯೆಂಬ ನರಕ" ಕಿರು ಚಿತ್ರ ಪ್ರದಶಿಸಲಾಯಿತು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆ ಬಗ್ಗೆ ವಿದ್ಯಾರ್ಥಿಗಳು ರುದ್ರಪ್ಪರವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.