ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ: ಸಚಿವ ಸುರೇಶಕುಮಾರ್

ಬಾಗಲಕೋಟೆ,  ಜೂನ್ 3 : ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ  ದೃಷ್ಟಿಯಿಂದ ಹೆಚ್ಚಿನ ಗಮನಹರಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಆತಂಕ, ಭಯ  ಬಿಟ್ಟು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವಂತೆ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢ  ಶಿಕ್ಷಣ ಸಚಿವರಾದ ಎಸ್.ಸುರೇಶಕುಮಾರ್ ಹೇಳಿದ್ದಾರೆ. ಜಿಲ್ಲಾ  ಪಂಚಾಯತ ಸಭಾಭವನದಲ್ಲಿಂದು ಜರುಗಿದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ  ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ಇದೇ ಜೂನ್ 25 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು  ಪ್ರಾರಂಭವಾಗಲಿದ್ದು, ಇಂದಿನಿಂದಲೇ ಪರೀಕ್ಷಾ ಕೇಂದ್ರಗಳ ಸಿದ್ದತೆಗೆ ಚೆಕ್‍ಲಿಸ್ಟ್  ಹಾಕಿಕೊಂಡು ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿ ಮಗುವಿನ ಬಗ್ಗೆ  ಗಮನ ಹರಿಸಲು ತಿಳಿಸಿದರು.

ಮಕ್ಕಳು ಸಾಧನೆ ಮಾಡಬೇಕೆಂಬ  ಆಶಾಭಾವನೆಗಳನ್ನು ಇಟ್ಟುಕೊಂಡು ವರ್ಷಾನುಗಟ್ಟಲೆ ಅಭ್ಯಾಸ ಮಾಡಿದ್ದಾರೆ. ಅವರ ಕನಸಿಗೆ  ಪೋಷಿಸುವ ಅಗತ್ಯವಿರುವುದನ್ನು ಮನಗಂಡು ಎಸ್.ಎಸ್.ಎಲ್.ಸಿ ಪರೀಕ್ಷೆ ಒಂದು ಪ್ರಮುಖ  ಘಟ್ಟವಾಗಿರುವುದರಿಂದ ಅವರ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.  ಆದ್ದರಿಂದ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಶಿಕ್ಷಕರು  ಮುಂದಾಗಬೇಕಿದೆ ಎಂದರು.

ಪರೀಕ್ಷೆ ಪ್ರಾರಂಭವಾಗುವ ಎರಡು  ದಿನಗಳ ಮುಂಚೆನೇ ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಗಳನ್ನು ಸಂಪೂರ್ಣವಾಗಿ  ಸ್ಯಾನಿಟೈಜೇಶನ್ ಮಾಡಬೇಕು. ಇದಕ್ಕೆ ಆರೋಗ್ಯ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕು.  ಪರೀಕ್ಷೆಗೆ ಬರುವ ಪ್ರತಿಯೊಂದು ಮಗು ಮಾಸ್ಕ್‌ ಧರಿಸುವುದು, ಸ್ಯಾನಿಟೈಜರ್ ಹಾಗೂ ಥರ್ಮಲ್  ಸ್ಕ್ರೀನಿಂಗ್ ಮೂಲಕ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಪರೀಕ್ಷಾ ಕೊಠಡಿ ಒಳಗಡೆ ಮತ್ತು  ಹೊರಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.  ಕೊಠಡಿಯಲ್ಲಿ ಪ್ರತಿಯೊಂದು ಮಗುವಿನ ಮತ್ತು ಡೆಸ್ಕ್ ಗಳ ನಡುವೆ ಕನಿಷ್ಠ ಮೂರುವರೆ ಅಡಿ  ಅಂತರ ಇರಬೇಕು ಎಂದು ಸೂಚಿಸಿದರು.

 ಪರೀಕ್ಷೆಗೆ ಬರುವಾರ ಕುದಿಸಿ ಆರಿಸಿ  ನೀರನ್ನು ಮನೆಯಿಂದಲೇ ತರುವಂತೆ ಮಕ್ಕಳಿಗೆ ತಿಳಿಸುವುದು ಉತ್ತಮ. ಪರೀಕ್ಷಾ  ಕೇಂದ್ರಗಳಲ್ಲಿ ಶೌಚಾಲಯ ಕೆಲಸ ಮಾಡುವ ರೀತಿಯಲ್ಲಿ ಇರಬೇಕು. ಇದರ ಜೊತೆಗೆ ಇತರೆ ಮೂಲಭೂತ  ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಆರೋಗ್ಯ, ಸಾರಿಗೆ,  ಗ್ರಾಮೀಣಾಭಿವೃದ್ದಿ ಇಲಾಖೆಯ ಜೊತೆ ಸಭೆ ನಡೆಸಿ, ಪರೀಕ್ಷಾ ಪಾವಿತ್ರತೆಗೆ ದಕ್ಕೆ ಬರದಂತೆ  ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲು ತಿಳಿಸಿದರು.

ಉಚಿತ ಮಾಸ್ಕ್, ಸ್ಯಾನಿಟೈಸರ್ ಪೂರೈಕೆ :ರಾಜ್ಯದ  8.50 ಲಕ್ಷ ಮಕ್ಕಳಿಗೆ ಮಾಸ್ಕ್‌  ಕೊಡಲು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನವರು ಮುಂದೆ  ಬಂದಿದ್ದಾರೆ. ತಮ್ಮ ಸ್ವಯಂ ಸೇವಕರ ಶ್ರದ್ಧೆ ಮತ್ತು ಅಕ್ಕರೆಯಿಂದ ತಯಾರಿಸಿದ  ಮಾಸ್ಕ್‌ ಗಳಾಗಿವೆ. ಇವುಗಳನ್ನು ಬಳಕೆ ಮಾಡಿದ ನಂತರ ವಾಶ್ ಮಾಡಿ ಪುನಃ ಬಳಸಬಹುದಾಗಿದೆ.  ಅದೇ ರೀತಿ ಖಾಸಗಿ ಸಂಸ್ಥೆಯೊಂದು 75 ಲಕ್ಷ ರೂ.ಗಳ ಮೌಲ್ಯದ ಸ್ಯಾನಿಟೈಜರ್‌ಗಳನ್ನು  ಉಚಿತವಾಗಿ ನೀಡಿದ್ದು, ಆಯಾ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಪೂರೈಸಲಾಗುತ್ತಿದೆ.  ಪರೀಕ್ಷಾ ಕೇಂದ್ರದ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು, ಸಿಬ್ಬಂದಿಗಳು ಮಾಸ್,  ಸ್ಯಾನಿಟೈಜರ್, ಹ್ಯಾಂಡ್ ಗ್ಲೋಸ್ ಹಾಕಿಕೊಳ್ಳತಕ್ಕದ್ದು ಎಂದರು.

ವಲಸೆ ಕಾರ್ಮಿಕರಿಗೆ ಗ್ರಾಮದಲ್ಲೇ ಪರೀಕ್ಷೆ ಬರೆಯಲು ಅವಕಾಶ :

 ವಲಸೆ ಕಾರ್ಮಿಕರ ಮಕ್ಕಳಿಗೆ ಅವರು ಇರುವ ಗ್ರಾಮಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ  ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಂಟೈನ್‍ಮೆಂಟ್ ಝೋನ್‍ನಲ್ಲಿ ಪರೀಕ್ಷಾ ಕೇಂದ್ರ  ಇರದಂತೆ  ನೋಡಿಕೊಳ್ಳಬೇಕು. ಪರೀಕ್ಷೆ ಪ್ರಾರಂಭವಾಗುವ ಎರಡು ದಿನ ಮುಂಚೆ ಕೋವಿಡ್  ದೃಡಪಟ್ಟರೆ ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ಒಂದು ವೇಳೆ ಪರೀಕ್ಷೆ  ನಡೆದ ಒಂದೆರಡು ದಿನದ ನಂತರ ಆ ಪ್ರದೇಶದಲ್ಲಿ ಕೋವಿಡ್‌ ದೃಢಪಟ್ಟರೆ ಅಂತಹ ಮಕ್ಕಳಿಗೆ ಜುಲೈ  ತಿಂಗಳಲ್ಲಿ ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ತೆಗೆದುಕೊಳ್ಳಲಾಗುತ್ತಿದೆ ಎಂದರು.

 ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ  ಪಿ.ಸಿ.ಗದ್ದಿಗೌಡರ , ಜಿ.ಪಂ ಉಪಾಧ್ಯಕ್ಷ  ಮುತ್ತಪ್ಪ ಕೋಮಾರ,  ಜಿಲ್ಲಾಧಿಕಾರಿ ಕ್ಯಾಪ್ಟನ್  ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಉಪಸ್ಥಿತರಿದ್ದರು.