ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಉದ್ಘಾಟನೆ ನೂತನ ಶಿವಾ ಲಿಂಗ ಮೂರ್ತಿಗಳ ಭವ್ಯ ಮೆರವಣಿಗೆ

ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಉದ್ಘಾಟನೆ ನೂತನ ಶಿವಾ ಲಿಂಗ ಮೂರ್ತಿಗಳ ಭವ್ಯ ಮೆರವಣಿಗೆ   Inauguration of the Mallikarjuna Swamy Temple and grand procession of the new Shiva Linga idols

ಲೋಕದರ್ಶನ ವರದಿ 

ಕಂಪ್ಲಿ  23: ನೂತನ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನ ಉದ್ಘಾಟನೆ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹೋತ್ಸವ ಹಿನ್ನಲೆ ಗ್ರಾಮದಲ್ಲಿ ಕುಂಭ, ಕಳಸ, ಮಕ್ಕಳ ವೇಷಭೂಷ ಸೇರಿದಂತೆ  ಕಲಾ ಪ್ರಕಾರಗಳ ನಡುವೆ ನೂತನ ಶಿಲಾ ಮೂರ್ತಿಗಳ ಭವ್ಯ ಮೆರವಣಿಗೆ. ಪ್ರಾಚೀನ ಕಾಲದಲ್ಲೇ ಸ್ಥಾಪಿತವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸ ಇದ್ದು, ಇಂತಹ ಐತಿಹಾಸಿಕ ಗ್ರಾಮದಲ್ಲಿ ನೂತನ ಮೂರ್ತಿಗಳ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಕ್ತರ ಉತ್ಸಾಹ, ಹುಮ್ಮಸ್ಸು ಕಂಡು ಬಂತು. ಗ್ರಾಮದ ಎದುರು ಬಸವಣ್ಣ ದೇವಸ್ಥಾನದಿಂದ ಪುರ ಪ್ರವೇಶದ ಹಿನ್ನಲೆ ನೂತನ ಶಿವಲಿಂಗ, ಗಣೇಶ, ನಂದಿ, ನಾಗ ಮೂರ್ತಿಗಳ ಭವ್ಯ ಮೆರವಣಿಗೆ ವಿವಿಧ ಕಲಾ ಪ್ರಕಾರಗಳಲ್ಲಿ ಅದ್ಧೂರಿಯಾಗಿ ಜರುಗಿತು.

ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ, ಕಳಸ, ಹೆಳ್ಮಕ್ಕಳ ಕೋಲಾಟ, ಭಜನೆ, ಡೊಳ್ಳು ಕುಣಿತ, ತಾಷಾರಾಂಡೋಲ್, ನಂದಿ ಕೋಲು, ಕಹಳೆ ವಾದನ, ಪಾರ್ವತಿ, ಪರಮೆಶ್ವರ, ಮಹಾನೀಯರ ಛದ್ಮಾವೇಷ, ಹನುಮಾನ್ ಮಾಲಾಧಾರಿಗಳು ಸೇರಿದಂತೆ ವಿವಿಧ ಪ್ರಕಾರಗಳು ಪಾಲ್ಗೊಂಡಿದವು. ತದನಂತರ ದೇವಸ್ಥಾನಕ್ಕೆ ಆಗಮಿಸಿ, ಗೋಮಾತೆ, ವಾಸ್ತು, ವಿನಾಯಕ ಪೂಜೆಯೊಂದಿಗೆ ಶ್ರೀಗಳ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶ ಹಾಗೂ ಜಲಾಧಿವಾಸ ಶ್ರದ್ಧಾಭಕ್ತಿಯಿಂದ ಅಚ್ಚುಕಟ್ಟಾಗಿ ಜರುಗಿತು.

ಸಂಜೆ ಕ್ಷೀರಾಧಿವಾಸ, ಉತ್ತರ ಪೂಜೆಗಳು ನಡೆದವು. ಇಲ್ಲಿನ ಎದುರು ಬಸವಣ್ಣ ದೇವಸ್ಥಾನ ಬಳಿಯಲ್ಲಿ ಸ್ಥಳೀಯ ಹಂಪಿ ಸಾವಿರ ದೇವರ ಮಹಾಂತ ಮಠದ ಪರಮಪೂಜ್ಯ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಇವರ ದಿವ್ಯ ಸಾನಿಧ್ಯದಲ್ಲಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದ ನಂತರ ಮಾತನಾಡಿ, ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ನೆಲೆಸಿದ ದಿನದಿಂದಲೂ ಪವಾಡ ಪುರಷನಾಗಿ, ದಿನನಿತ್ಯ ಆರಾಧಿಸುವ ಭಕ್ತರ ಬೇಡಿಕೆಗಳಿಗೆ ಇಷ್ಟಾರ್ಥ ಪ್ರಾಪ್ತಿ ನೀಡುತ್ತಿದ್ದಾರೆ. ಇಂದು ಈ ಮಟ್ಟದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ದೇವಸ್ಥಾನ ಸ್ಥಾಪನೆಗೆ ಸಹಕಾರವಿದೆ.

ಲೋಕಕಲ್ಯಾಣಕ್ಕಾಗಿ ದೇವರ ಆರಾಧನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿವೆ. ಇಲ್ಲಿನ ಸದ್ಭಕ್ತರ ಸೇವೆಗೆ ಆ ದೇವರು ಸಕಾಲದಲ್ಲಿ ಮಳೆ, ಬೆಳೆ, ಸಮೃದ್ಧಿಯನ್ನು ದಯಪಾಲಿಸಲಿ ಎಂದರು.  ಇಲ್ಲಿನ ದೇವಸ್ಥಾನದ ಗರ್ಭಗುಡಿಯ ಎದುರಿಗೆ ಶಾಸ್ತ್ರೋಕ್ತವಾಗಿ ಧ್ವಜಸ್ತಂಭ ಪ್ರತಿಷ್ಠಾಪಿಸಲಾಯಿತು.  ಇಲ್ಲಿನ ಮೆರವಣಿಗೆಯಲ್ಲಿ ಹಾಲಿ ಶಾಸಕ ಜೆ.ಎನ್‌.ಗಣೇಶ್, ಮಾಜಿ ಶಾಸಕ ಟಿ.ಎಚ್‌.ಸುರೇಶ್ ಬಾಬು ಪಾಲ್ಗೊಂಡು, ದೇವರ ಕೃಪೆಗೆ ಪಾತ್ರರಾದರು. ಭವ್ಯ ಮೆರವಣಿಗೆಯ  ನಂತರ ಅನ್ನ ಸಂತಾರೆ​‍್ಣ ಜರುಗಿತು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಸದ್ಭಕ್ತರು ಪಾಲ್ಗೊಂಡಿದ್ದರು.