ವಿಶೇಷ ತರಬೇತಿ ಕಾರ್ಯಕ್ರಮದ ಉದ್ಘಾಟನೆ

 ವಿಶೇಷ ತರಬೇತಿ ಕಾರ್ಯಕ್ರಮದ ಉದ್ಘಾಟನೆ  Inauguration of Special Training Program

ಲೋಕದರ್ಶನ ವರದಿ 

ವಿಶೇಷ ತರಬೇತಿ ಕಾರ್ಯಕ್ರಮದ ಉದ್ಘಾಟನೆ  

ಗದಗ  9:  ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಕೆ.ಸಿ.ಸಿ. ಬ್ಯಾಂಕ್ ಲಿ., ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ಚುನಾವಣೆ ಜರುಗಲಿರುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಗುರುವಾರ  ದಿ ಕೆ.ಸಿ.ಸಿ.ಬ್ಯಾಂಕ್ ಲಿ., ಗದಗ ಇದರ ಸಭಾಭವನ, ಪಾಲಾ ಬದಾಮಿ ರಸ್ತೆ, ಗಾಂಧಿ ಸರ್ಕಲ್ ಹತ್ತಿರ, ಗದಗ ಇಲ್ಲಿ ಹಮ್ಮಿಕೊಳ್ಳಲಾಯಿತು.      

ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್‌. ಎಸ್‌. ಕಬಾಡೆ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಯಾವ ಸಹಕಾರ ಸಂಘದ ರಿಟರ್ನಿಂಗ್ ಅಧಿಕಾರಿಯಾಗಿ ನೇಮಿಸಲಾಗಿದೆಯೋ ಆ ಸಹಕಾರ ಸಂಘದ ಉಪವಿಧಿಯನ್ನು ಅಧ್ಯಯನ ಮಾಡಿ ಆಡಳಿತ ಮಂಡಲಿಯ ಸ್ವರೂಪವನ್ನು ರಿಟರ್ನಿಂಗ್ ಅಧಿಕಾರಿಗಳು ತಿಳಿದುಕೊಳ್ಳತಕ್ಕದ್ದು, ಉಪವಿಧಿಯು ನೋಂದಣಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳತಕ್ಕದ್ದು, (ನಿಯಮ 13 ಇ) ಪ್ರಕಾರ ಎಲ್ಲಾ ಕಾನೂನಾತ್ಮಕವಾಗಿ ಸಹಕಾರ ಸಂಘಗಳ ನಿರ್ವಹಣೆ ಮಾಡಿಕೊಂಡು ಸಂಘಗಳನ್ನು ಬೆಳಸಬೇಕು ಎಂದು ಹೇಳಿದರು. 

ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾದ ಎಚ್‌. ಜಿ. ಹಿರೇಗೌಡ್ರ ರವರು ಆಡಳಿತ ಮಂಡಳಿ ಸದಸ್ಯರ ಚುನಾವಣೆ ನಡೆಸಲು ಅತ್ಯಂತ ಪ್ರಮುಖ ಅವಶ್ಯಕತೆ ಅರ್ಹ ಮತದಾರರ ಯಾದಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕನು ಕಳೆದ 5 ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಯಾವುದೇ 2 ಸಭೆಗಳಿಗೆ ಹಾಜರಾಗದ ಮತ್ತು ಕಳೆದ 5 ಸಹಕಾರ ವರ್ಷಗಳ ಪೈಕಿ ಕನಿಷ್ಠ ಯಾವುದೇ 2 ಸಹಕಾರ ವರ್ಷಗಳಲ್ಲಿ ಸಂಘದ ಉಪವಿಧಿಗಳಲ್ಲಿ ನಿಗಧಿಪಡಿಸಿದ ಕನಿಷ್ಠ ಸೇವೆಗಳನ್ನು ಬಳಸಿಕೊಳ್ಳಲು ವಿಫಲರಾದ ಸದಸ್ಯರಿಗೆ ಚುನಾವಣಾ ದಿನಾಂಕಕ್ಕಿಂತ 180 ದಿನಗಳ ಮುಂಚೆ, ಸ್ಪಷ್ಟ 15 ದಿನಗಳ ನೋಂದಾಯಿತ ಅಂಚೆ ಮೂಲಕ ನೋಟಿಸನ್ನು ಹೊರಡಿಸತಕ್ಕದ್ದು ಮತ್ತು ಅಂತಹ ಅನರ್ಹ ಸದಸ್ಯರಿಗೆ ತಾನು ನೋಟಿಸು ಹೊರಡಿಸಿದ 15 ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸಲು  ತಿಳಿಸತಕ್ಕದ್ದು. ಅಲ್ಲದೆ ಅನರ್ಹ ಸದಸ್ಯನು ತನ್ನ ಆಕ್ಷೇಪಣೆಗಳನ್ನು ನೋಟಿಸು ಹೋರಡಿಸಿದ 30 ರಿಂದ 60 ದಿನಗಳೊಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಗೆ ಹಾಜರಾಗಿ ಪರಿಹಾರ ಕಂಡುಕೊಳ್ಳುವಂತೆ ನೋಟಿಸಿನಲ್ಲಿ ಪ್ರಕಟಿಸಬೇಕೆಂದು ಹೇಳಿದರು ಯೂನಿಯನ್‌ದ ವತಿಯಿಂದ ಜರುಗುವ ಇಂತಹ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂನಿಯನ್‌ದ ಅಧ್ಯಕ್ಷರಾದ ಸಿ. ಎಂ. ಪಾಟೀಲರವರು ವಹಿಸಿ ಮಾತನಾಡುತ್ತಾ       ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 20 ರ ಮೇರೆಗೆ ಸದಸ್ಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಕಳೆದ 5 ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಯಾವುದೇ 2 ಸಭೆಗಳಿಗೆ ಹಾಜರಾಗುವುದು ಮತ್ತು ಕಳೆದ 5 ಸಹಕಾರ ವರ್ಷಗಳ ಪೈಕಿ ಕನಿಷ್ಠ ಯಾವುದೇ 2 ಸಹಕಾರ ವರ್ಷಗಳಲ್ಲಿ ಸಂಘದ ಉಪವಿಧಿಗಳಲ್ಲಿ ನಿಗಧಿಪಡಿಸಿದ ಕನಿಷ್ಠ ಸೇವೆಗಳನ್ನು ಬಳಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಇಷ್ಟೆ ಅಲ್ಲದೆ ಇಂದಿನ ಕಾರ್ಯಕ್ರಮದಲ್ಲಿ ತಮಗೆ ತಿಳಿಯದ ವಿಷಯಗಳನ್ನು ತಿಳಿದುಕೊಂಡು ಹಾಗೂ ಮಹಾಮಂಡಳ ಹಾಗೂ ಯೂನಿಯನ್‌ದ ಸಹಯೋಗದೊಂದಿಗೆ ಜರುಗುವ ಇಂತಹ ಕಾರ್ಯಕ್ರಮದಲ್ಲಿ ಎಲ್ಲಾ ಸಂಘದವರು ಕಾಲಕಾಲಕ್ಕೆ ಜರುಗುವ ತರಬೇತಿಯಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆದು ತಮ್ಮ ಸಂಘಗಳ ಏಳ್ಗೆಗೆ ಶ್ರಮಿಸಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇದರ ಉಪಾಧ್ಯಕ್ಷರಾದ ವಾಯ್‌. ಎಫ್‌. ಪಾಟೀಲ, ನಿರ್ದೆಶಕರಾದ ಎಸ್‌. ಕೆ. ಕುರಡಗಿ ಗದಗ, ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಶಾಂತಾ ಎಚ್‌. ಎಂ., ಧಾರವಾಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಸಿ. ಎಸ್‌. ಕಲ್ಲನಗೌಡರ, ಡಿ. ಐ. ನದಾಫ್,   ಬಸವರಾಜ ಜುಮ್ಮಣ್ಣವರ ಹಾಗೂ   ಕಿರಣಕುಮಾರ ಹುಗ್ಗಿ ಉಪಸ್ಥಿತರಿದ್ದರು. 

 ತರಬೇತಿ ಕಾರ್ಯಾಗಾರದಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಲಿ ಚುನಾವಣೆ ಜರುಗಿಸುವ ವಿಧಿ ವಿಧಾನಗಳ ಕುರಿತು  ಶಂಕರ ಎಸ್‌. ಕರಬಸಣ್ಣವರ, ಸಹಕಾರ ಅಭಿವೃಧ್ಧಿ ಅಧಿಕಾರಿಗಳು, ರಾಯಬಾಗ ಜಿ.ಬೆಳಗಾವಿ ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಗದಗ ಇದರ ಪ್ರಭಾರ ಜಿಲ್ಲಾ ನಿಯಂತ್ರಣಾಧಿಕಾರಿಗಳಾದ ಸುನೀಲ್‌ಕುಮಾರ ಚಳಗೇರಿ ರವರು ಸಹಕಾರ ಸಂಘಗಳ ಪದಾಧಿಕಾರಿಗಳ ಚುನಾವಣೆ ಜರುಗಿಸುವ ಕುರಿತು ಉಪನ್ಯಾಸವನ್ನು ನೀಡಿದರು. 

 ಗಂಗಾಪೂರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಶ್ರೀಮತಿ ರೇಣುಕಾ ಈರನಗೌಡ್ರ ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್‌. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು.   ಮಹಿಳಾ ಸಹಕಾರ ಶಿಕ್ಷಕಿ ಶ್ರೀಮತಿ ಆರ್‌. ಸಿ. ಯಲಿಗಾರ ವಂದಿಸಿದರು.