ಧಾರವಾಡ 17: ಸೃಷ್ಟಿಕರ್ತನಾದ ಪರಮಾತ್ಮ ಕೈಲಾಸದಲ್ಲೂ ಇಲ್ಲ. ಗುಡ್ಡ ಬೆಟ್ಟ, ಪರ್ವತ ಶ್ರೇಣಿ, ಮಂದಿರದಲ್ಲೂ ಇಲ್ಲ. ಭಕ್ತರ ಹೃದಯ ಮಂದಿರದಲ್ಲಿ ಸದಾ ಇದ್ದಾನೆ ಎಂದು ಮುರುಘಾಮಠ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ಕೆಲಗೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಯಿಬಾಬಾ ಮಂದಿರದ ಮಹಾದ್ವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಧಾರವಾಡದಲ್ಲಿ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣವಾಗಲು ನಿಮ್ಮ ಭಕ್ತಿ, ಭಾವ, ಪ್ರೇಮ ಕಾರಣ ಎಂದರು.
ಭಕ್ತರ ಭಕ್ತಿ ಅದಮ್ಯವಾದದ್ದು, ಶಿರಡಿ ಸಾಯಿಬಾಬಾ ಧಾರವಾಡದಲ್ಲು ನೆಲೆಸಿರುವುದಕ್ಕೆ ಇಲ್ಲಿ ಆಗಮಿಸಿರುವ ಜನಸಾಗರವೇ ಸಾಕ್ಷಿಯಾಗಿದೆ. ಮಹಾತ್ಮರ ನೆನೆಸುವುದು ಪುಣ್ಯದ ಕೆಲಸ. ಅದರಿಂದ ನಮ್ಮ ಭವ್ಯ ಭವಿಷ್ಯ ಗೋಚರವಾಗುತ್ತದೆ. ಎನಗೆ ನಿಮ್ಮ ಸಾನಿಧ್ಯವೇ ಉದಯ, ಅಸ್ತಂಗತ ಎಂದರು.
ಸಾಯಿಬಾಬಾರವರು ಪರಂಜ್ಯೋತಿ ಇದ್ದಂಗ, ಜ್ಯೋತಿ ಆರಬಹುದು ಆದರೆ ಪರಂಜ್ಯೋತಿ ಎಂದಿಗೂ ಆರಲ್ಲ. ಅರಮನೆಯ ದೀಪ ಹೊರಗಿನ ಕತ್ತಲೆ ನಿವಾರಣೆ ಮಾಡಿದರೆ ಮಹಾನ್ ಪುರುಷರ ನೆನೆಸಿದರೆ ನಮ್ಮ ಬದುಕಿನ ಕತ್ತಲೆ ನಿವಾರಣೆ ಆಗುತ್ತದೆ ಎಂದರು.
ಮಹೇಶ ಶೆಟ್ಟಿಯವರು ಸಾಯಿಬಾಬಾ ಮಂದಿರದ ಅಧ್ಯಕ್ಷರಾದ ಬಳಿಕ ಅನ್ನದಾಸೋಹ ಹಿಡಿದು ಎಲ್ಲ ಕೆಲಸ ಕಾರ್ಯಗಳು ಸಮರ್ಥವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಿಕೊಂಡು ಹೊರಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಸದಾಕಾಲ ಗುರುವನ್ನು ನೆನಸಬೇಕು. ಕೇವಲ ಗುರು ಪೂರ್ಣಿಮೆ ದಿನ ಅದಕ್ಕೆ ಸೀಮಿತ ವಾಗಬಾರದು. ನಾವು ಭಕ್ತಿ, ಜ್ಞಾನ, ಧರ್ಮ ಕಳೆದುಕೊಂಡರೆ ಪಶುಗಳಾಗುತ್ತವೆ. ನಾವು ಜ್ಞಾನ ಮಾರ್ಗದಲ್ಲಿ ನಡೆದರೆ ನಮ್ಮಲ್ಲಿ ಜ್ಞಾನ ಭಕ್ತಿ, ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.
ಅಭಿನವ ಪ್ರಭು ಕಲ್ಮಠಶ್ರೀ ಮಾತನಾಡಿ, ಸಾಯಿಬಾಬಾ ಸಬ್ ಕಾ ಮಾಲೀಕ್ ಏಕ್ ಅಂತ ಹೇಳಿದ ಮಹಾನ್ ಪುರುಷರು. ಮನುಷ್ಯ ಎಷ್ಟು ದಿನ ಬದುಕತಾನ ಅದು ಮುಖ್ಯ ಅಲ್ಲ ಬದುಕಿನಲ್ಲಿ ಒಳ್ಳೆಯ ಕೆಲಸ ಹಾಗೂ ಸೌಹಾರ್ದ ಕೆಲಸ ಮಾಡುವುದರಿಂದ ಘನತೆ ಗೌರವ ಬರುವ ಹಾಗೆ ಬದುಕಬೇಕು. ಆ ರೀತಿಯ ಬದುಕು ನಮ್ಮದಾಗಬೇಕು ಎಂದರು.
ಅಂತಹ ಕೆಲಸವನ್ನು ಮಹೇಶ ಶೆಟ್ಟಿ ಹಾಗೂ ಅವರ ತಂಡ ಮಾಡತಾ ಇದೆ. ಮುರುಘಾ ಮಠದಂತೆ ಸಾಯಿ ಬಾಬಾ ಮಂದಿರವು ಎತ್ತರ ಎತ್ತರ ಬೆಳೆಯುತ್ತಿದೆ. ಧಾರವಾಡ ಸಾಹಿತ್ಯ ಸಂಸ್ಕೃತ, ಜೊತೆಗೆ ಧಾರ್ಮಿಕಕ್ಕೂ ಹೆಸರಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ ಮಾತನಾಡಿ, ಶಿರಡಿಯ ಸಾಯಿಬಾಬಾ ಮಂದಿರದ ಮಾದರಿಯಲ್ಲಿಯೇ ಧಾರವಾಡದ ಮಂದಿರವೂ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಾಬಾನ ಸನ್ನಿಧಿಯಲ್ಲಿ ನಮ್ಮ ಕಷ್ಟ ಕಾರ್ಪಣ್ರ್ಯಗಳನ್ನು ಹೇಳಿಕೊಂಡರೆ ನಿವಾರಣೆಯಾಗುತ್ತವೆ. ಗುರುಪೂರ್ಣಿಮೆಯ ದಿನ ಇಲ್ಲಿಗೆ ಹರಿದುಬಂದ ಭಕ್ತ ಸಾಗರವೇ ಇದಕ್ಕೆ ಸಾಕ್ಷಿಯೆಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ಅವರು ಮಾತನಾಡಿ, ಮಹಾದ್ವಾರ ಮಳೆ ಆಗಿದ್ದರಿಂದ ಸಾಂಕೇತಿಕವಾಗಿ ಉದ್ಘಾಟಿಸಲಾಗಿದೆ. ಅನ್ನಬ್ರಹ್ಮ ಮೂರ್ತಿನೋಡಲು ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಗಂಟೆಗಳ ಕಾಲ ಭಕ್ತರು ಸರದಿಯಲ್ಲಿ ನಿಂತು ಕಾದು ಬಾಬಾನ ಸನ್ನಿಧಿಯಲ್ಲಿ ಆಶೀರ್ವಾದ ಪಡೆಯುತ್ತಿರುವುದು ನೋಡಿದರೆ ಸಾಕ್ಷಾತ್ ಶಿರಡಿ ಸಾಯಿಬಾಬ ಮಂದಿರದಂತೆ ಬೆಳೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾಟ್ಯ ಸ್ಪೂರ್ತಿ ಕಲ್ಚರಲ್ ಅಕಾಡೆಮಿ ಮಕ್ಕಳು ನಡೆಸಿಕೊಟ್ಟ ಕುರುಕ್ಷೇತ್ರದ ಸನ್ನಿವೇಶ ಮಹಾಭಾರತದ ಅಭಿಮನ್ಯು, ಕರ್ಣ, ಅರ್ಜುನರ ಕಾಳಗದ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಅದೇ ರೀತಿ ಬಂಜಾರ ನೃತ್ಯ, ಗುಜರಾತಿ ಜಾನಪದ ನೃತ್ಯ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುವಂತೆ ಮಾಡಿದರೆ, ನಮ್ಮ ಭಾರತ ನೃತ್ಯವೂ ಹೆಚ್ಚುತ್ತಿರುವ ಆಧುನಿಕತೆ, ಭಯೋತ್ಪಾದನೆ, ಭ್ರಷ್ಟಾಚಾರ, ಗಲಭೆ, ಹಿಂಸೆ, ಅತ್ಯಾಚಾರದ ಜನ್ಮ ಜಾಲಾಡುವಂತೆ ಮಾಡಿತು.
ಇದೇ ವೇಳೆ ಶಾಂತಲಾ ನೃತ್ಯಾಲಯದ ಮಕ್ಕಳು ನಡೆಸಿಕೊಟ್ಟ ಶಾಸ್ತ್ರೀಯ ನೃತ್ಯ ಜನಮನ ತಣಿಸುವ ಮೂಲಕ ಹೊಸ ಲೋಕವನ್ನೆ ಅನಾವರಣಗೊಳಿಸುವಂತೆ ಮಾಡಿತು.
ವೇದಿಕೆ ಮೇಲೆ ಶಿರಡಿ ಸಾಯಿಬಾಬಾ ಸಂಸ್ಥೆಯ ಕಾರ್ಯದರ್ಶಿ ಗುರುಪಾದಯ್ಯ ಹೊಂಗಲ್ ಮಠ, ಉಪಾಧ್ಯಕ್ಷ ಉದಯ ಶೆಟ್ಟಿ, ಖಜಾಂಚಿ ಕಿರಣ ಶಹಾ, ಉಪಕಾರ್ಯದರ್ಶಿ ನಾರಾಯಣ ಕದಂ, ಸಮಿತಿ ಸದಸ್ಯರಾದ ಟಿ.ಟಿ. ಚವ್ಹಾಣ, ಭಾಸ್ಕರ್ ರಾಯ್ಕರ್, ಸದಸ್ಯರಾದ ಸಂತೋಷ ಮಹಾಲೆ, ಅಮೃತ ನರೇಂದ್ರ, ಪ್ರದೀಪ ಕಕ್ಕಳ, ದಿನೇಶ ಅಡ್ಯಂತಾಯ, ಸಂತೋಷ ಮಿಕ್ಕಲಿ, ರಮೇಶ ನಾರಾಯಣಕರ, ಟಿ,ಟಿ. ಚವ್ಹಾಣ, ಸರೋಜನಿ ಕೊಟಬಾಗಿ, ಭಾಸ್ಕರ ರಾಯ್ಕರ, ಅಮೃತ ನರೇಂದ್ರ, ವಿಪಿನ್ನಂದ ಶೆಟ್ಟಿ, ಶಿವಯೋಗಿ ಬೆಣ್ಣಿ, ವಿಜಯ ಲಾಡ್, ಭಾಸ್ಕರ್ ಮಾನೆ, ಸೌರಭ ಸಳಗಾಂವಕರ್, ರಾಜೇಶ್ವರಿ ನರೇಂದ್ರ, ರತ್ನಾ ನಂದೆಪ್ಪನವರ, ಜಯಶ್ರೀ ಶಿವಪೂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುರೇಶ ಹಂಪಿಹೊಳಿ ನಿರೂಪಿಸಿ, ಸ್ವಾಗತಿಸಿದರು. ರಾಜೇಶ್ವರಿ ಹಾಗೂ ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು.