ಕಲಬುರಗಿ, ಫೆ.6, ಕಲಬುರಗು ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿಲ್ಲ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರು ಅಭಿವೃದ್ಧಿಯಾದರೆ ಸಾಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಅದಕ್ಕಾಗಿ ಈಗ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಜನಾದೇಶ ದಿಕ್ಕರಿಸಿ ಬಿಜೆಪಿಗೆ ಹೋಗಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಅನರ್ಹ ಶಾಸಕರ ಶಕ್ತಿಯ ಮೇಲೆ ಯಡಿಯೂರಪ್ಪ ಸರ್ಕಾರ ರಚನೆ ಮಾಡಿದ್ದಾರೆ. ರಾಜ್ಯದ ಅತಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರ ಸ್ಥಾನವಾದ ಕಲಬುರಗಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಒತ್ತಾಯಿಸಿದ ಅವರು, ಯಡಿಯೂರಪ್ಪ ಸರ್ಕಾರದ ನಿಯಂತ್ರಣ ಕೇಂದ್ರದ ಕೈಯಲ್ಲಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ಯದ ಪ್ರತಿಯೊಂದು ವಿಚಾರದಲ್ಲೂ ಕೇಂದ್ರ ಮೂಗು ತೂರಿಸುತ್ತಿದೆ ಎಂದು ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಭರ್ತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಯಾರನ್ನು ನೇಮಕ ಮಾಡಬೇಕು ಎನ್ನುವುದು ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ ಖರ್ಗೆ, ರಾಮಮಂದಿರ ನಿರ್ಮಾಣ ಕುರಿತಂತೆ ಕೇಂದ್ರ ಸರ್ಕಾರ ಟ್ರಸ್ಟ್ ರಚಿಸಿದ್ದಾರೆ. ಟ್ರಸ್ಟ್‌ನಲ್ಲಿ ದಲಿತರನ್ನು ಸೇರಿಸಿಕೊಳ್ಳಲಾಗಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆ ಖಂಡನೀಯ. ದಲಿತರು ಹಿಂದುಗಳಲ್ಲವೇ ? ಎಂದು ಪ್ರಶ್ನಿಸಿದ ಅವರು, ದಲಿತರು ಎಂದು ಚುಚ್ಚಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಮನೆಗೆ ಹೋಗಿ ಊಟ ಮಾಡುತ್ತೇವೆ, ದಲಿತರು ಎಂದು ಚುಚ್ಚಿ ಮಾತನಾಡುವುದು ಸರಿಯಲ್ಲ. ದಲಿತರನ್ನು ದಲಿತರು ಎಂದು ಪದೇ ಪದೇ ಯಾಕೆ ಹೇಳುತ್ತಾರೆ. ದಲಿತರು ಹಿಂದೂ ಧರ್ಮದ ಭಾಗವಲ್ಲವೇ ? ಬಿಜೆಪಿಯವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿದ್ದಾರೆಯೇ ಎಂದು ಖರ್ಗೆ ಪ್ರಶ್ನಿಸಿದರು.