ಸವದತ್ತಿ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಮಹತ್ವದ ಪ್ರಾಧಿಕಾರ ಸಭೆ

ಸವದತ್ತಿ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಮಹತ್ವದ ಪ್ರಾಧಿಕಾರ ಸಭೆ Important authority meeting for the comprehensive development of Savadatti Yallammanagudda

ಲೋಕದರ್ಶನ ವರದಿ 

ಸವದತ್ತಿ 18: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಸವದತ್ತಿ  ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಮಹತ್ವದ ಪ್ರಾಧಿಕಾರದ ಸಭೆ ಜರುಗಿತು. ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರಮುಖ ಸಭೆಯಲ್ಲಿ, ಶ್ರೀ ಯಲ್ಲಮ್ಮದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವಿವಿಧ ಪ್ರಗತಿ ಕಾರ್ಯಗಳು ಹಾಗೂ ಮುಂದಿನ ಯೋಜನೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಸಕ್ರಿಯವಾಗಿ ಭಾಗವಹಿಸಿ, ಕ್ಷೇತ್ರಕ್ಕೆ ತುರ್ತಾಗಿ ಅಗತ್ಯವಿರುವ ಮೂಲಸೌಕರ್ಯಗಳು ಮತ್ತು ದಿನನಿತ್ಯ ಬರುವ ಭಕ್ತಾದಿಗಳಿಗೆ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯಗಳ ಕುರಿತು ಸಚಿವರ ಗಮನ ಸೆಳೆದರು.

ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಬಳಿಕ ಮಾತನಾಡಿದ ಸಚಿವರಾದ ರಾಮಲಿಂಗಾರೆಡ್ಡಿ ಅವರು, ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ಪುಣ್ಯಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಸಜ್ಜಿತಗೊಳಿಸಲು ಸರ್ಕಾರ ಬದ್ಧವಾಗಿದೆ. ಪ್ರಾಧಿಕಾರದ ಮೂಲಕ ಹಮ್ಮಿಕೊಳ್ಳಲಾಗಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು, ಎಂದು ಭರವಸೆ ನೀಡಿದರು. ಈ ಮಹತ್ವದ ಸಭೆಯಲ್ಲಿ ಮುಜರಾಯಿ ಇಲಾಖೆಯ ಉನ್ನತ ಅಧಿಕಾರಿಗಳು, ಯಲ್ಲಮ್ಮದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರು ಹಾಗೂ ಇಲಾಖೆಯ ವಿವಿಧ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.