ಶ್ರೀ ಮಹರ್ಷಿ ಭಗೀರಥ ಅವರ ಆದರ್ಶಗಳನ್ನು ಅಳವಡಿಸಿಕೋಳ್ಳಿ: ಉಮಾ ಉಪ್ಪಾರ

ಶ್ರೀ ಮಹರ್ಷಿ ಭಗೀರಥ ಅವರ ಆದರ್ಶಗಳನ್ನು ಅಳವಡಿಸಿಕೋಳ್ಳಿ: ಉಮಾ ಉಪ್ಪಾರ Implement the ideals of Shri Maharishi Bhagiratha said Uma Uppara

ಲೋಕದರ್ಶನ ವರದಿ 

ಬೆಳಗಾವಿ, ಮೇ.11: ನಿರಂತರ ಪ್ರಯತ್ನದಿಂದ(ತಪ್ಪಸ್ಸಿನಿಂದ) ಫಲ ಸಾಧ್ಯ. ಶ್ರೀ ಭಗೀರಥರು ಪಂಚಾಗ್ನಿಯಲ್ಲಿ ತಪಸ್ಸು ಮಾಡಿ ಗಂಗೆಯನ್ನು ದೇವಲೋಕದಿಂದ ಭೂಮಿಗೆ ತಂದರು. ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವವನ್ನು ಬದಿಗಿಟ್ಟು ಎಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು ಎಂದು ಸರ್ಕಾರಿ ಪಿ ಯು ಸಿ ಕಾಲೇಜು ಮಾಂತೇಶ ನಗರ ಉಪನ್ಯಾಸಕಿ ಉಮಾ ಉಪ್ಪಾರ ಅವರು ಹೇಳಿದರು. 

ಜಿಲ್ಲಾಡಳಿತ ಬೆಳಗಾವಿ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತಿ ಉತ್ಸವವನ್ನು ಆಚರಿಸಲಾಯಿತು. 

ಇಕ್ಷ್ವಾ ವಂಶದ ಭಗೀರಥ ಬಹು ದೊಡ್ಡ ಐತಿಹಾಸಿಕ ಮತ್ತು ಧಾರ್ಮಿಕ ಪಾರಂಪರಿಕತೆ ಹೊಂದಿರುವ ಸಮುದಾಯವಾಗಿದೆ. ಛಲಬಿಡದೆ ಗಂಗೆಯನ್ನು ಭೂಲೋಕಕ್ಕೆ ತಂದಂತಹ ಭಗೀರಥರಂತೆ ಇಂದಿನ ಯುವ ಜನತೆ ತಮ್ಮ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ಮಾಡುವಂತೆ ಹೇಳಿದರು. 

ಸಮುದಾಯದ ಪ್ರತಿಯೊಬ್ಬರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ವಿದ್ಯೆಯನ್ನು ಯಾರು ಕದಿಯಲಾರರು ವಿದ್ಯೆಯನ್ನು ಜೀವನದ ಕೊನೆಯವರೆಗೂ ಪಡೆಯುವ ಪ್ರಕ್ರಿಯೆಯಾಗಿದೆ ಎಂದು ಉಪನ್ಯಾಸಕಿ ಉಮಾ ಉಪ್ಪಾರ ಅವರು ಹೇಳಿದರು. 

ಭಗೀರಥ ಪೀಠ ಹೊಸದುರ್ಗದ ಡಾ. ಪುರುಷೋತ್ತಮಾನಂದಪೂರಿ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭರಮಣ್ಣ ಉಪ್ಪಾರ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಜಿ.ಎಸ್‌.ಉಪ್ಪಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಕೆ.ಎಮ್‌.ಎಫ್ ನಿರ್ದೇಶಕರಾದ ಬಸವರಾಜ ಮಾಳೆದ ಸೇರಿದಂತೆ ಜಿಲ್ಲೆಯ ಉಪ್ಪಾರ ಸಮಾಜದ ಗಣ್ಯರು, ಪದಾಧಿಕಾರಿಗಳು, ಸಮಾಜದ ಬಾಂಧವರು ಉಪಸ್ಥಿತರಿದ್ದರು.