ಸಿಎಎ ವಿರುದ್ಧ ಪ್ರತಿಭಟನೆಗಳಿಂದ ಮಂಡ್ಯ ಜಿಲ್ಲೆ ಪ್ರವಾಸೋದ್ಯಮದ ಮೇಲೆ ಪರಿಣಾಮ

ಮಂಡ್ಯ, ಡಿ. 28      ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರುದ್ಧದ ಪ್ರತಿಭಟನೆಗಳು ರಾಜ್ಯದ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಸಕ್ಕರೆ ಜಿಲ್ಲೆ ಮಂಡ್ಯದ ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. 100 ಕ್ಕೂ ಹೆಚ್ಚು ಪ್ರಮುಖ ಪ್ರವಾಸೋದ್ಯಮ ತಾಣಗಳನ್ನು ಹೊಂದಿರುವ ಸಕ್ಕರೆ ಬಟ್ಟಲು ಜಿಲ್ಲೆಯಾದ ಮಂಡ್ಯ, ವಾರ್ಷಿಕ ಸುಮಾರು 12 ಲಕ್ಷ ಪ್ರವಾಸಿಗರನ್ನು ಆಕಷರ್ಿಸುತ್ತದೆ. ಮಂಗಳೂರಿನಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡ ನಂತರ ಪ್ರವಾಸಿಗರ ಆಗಮನ ಗಣನೀಯವಾಗಿ ಕುಸಿದಿದೆ. ನಿರಂತರ ರಸ್ತೆ ತಡೆ ಮತ್ತು ಭಯದಿಂದ ಜನರು ಅದರಲ್ಲೂ ಮುಖ್ಯವಾಗಿ ನೆರೆಯ ರಾಜ್ಯಗಳ ಜನರು ಪ್ರವಾಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಮಂಡ್ಯ ಪ್ರವಾಸಿ ತಾಣಗಳ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ ತೀರದಲ್ಲಿರುವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ. ಕ್ರಿಸ್ಮಸ್ ರಜಾ ದಿನಗಳಲ್ಲಿ ದಿನಕ್ಕೆ ಸರಾಸರಿ ಪ್ರವಾಸಿಗರ ಆಗಮನ 3,500 ರಿಂದ 4,000 ರವರೆಗೆ ಇರುತ್ತದೆ. ಆದರೆ, ಇದು ಈಗ 2,000 ಕ್ಕಿಂತಲೂ ಕಡಿಮೆಯಾಗಿದೆ ಎಂದು ರಂಗನತಿಟ್ಟು ಉಪ ವಲಯ ಅರಣ್ಯ ಅಧಿಕಾರಿ ಪುಟ್ಟಮಾದೆ ಗೌಡ ಹೇಳಿದ್ದಾರೆ. ಮತ್ತೊಬ್ಬ ಹಿರಿಯ ಅರಣ್ಯ ಅಧಿಕಾರಿ ಹೇಳುವಂತೆ ಕಳೆದ ವರ್ಷ ಡಿ 25 ರಂದು ಪ್ರವೇಶ ಟಿಕೆಟ್ ಮತ್ತು ಬೋಟಿಂಗ್ ನಿಂದ  4.7 ಲಕ್ಷ ರೂ. ಸಂಗ್ರಹವಾಗಿತ್ತು. ಆದರೆ, ಇದು ಈ ವರ್ಷ 3.78 ಲಕ್ಷ ರೂ.ಗೆ ಇಳಿದಿದೆ. ಭಯದಿಂದ ಶಿಕ್ಷಣ ಸಂಸ್ಥೆಗಳು ತಮ್ಮ ಪ್ರವಾಸಗಳನ್ನು ಮುಂದೂಡಿವೆ ಎಂದು ಅವರು ಹೇಳಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪ್ರತಿಭಟನೆಗಳ ನಿಖರ ಪರಿಣಾಮ ಡಿ 31 ರ ನಂತರವೇ ತಿಳಿಯಲಿದೆ ಎಂದು ಮಂಡ್ಯ ಜಿಲ್ಲೆ ಪ್ರವಾಸೋದ್ಯಮ ಸಹಾಯಕ ನಿದರ್ೆಶಕ ಹರೀಶ್ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ(ಕೆಆರ್ಎಸ್) ಅಣೆಕಟ್ಟು ಕೆಳಗಿನ ಬೃಂದಾವನ ಉದ್ಯಾನದ ಮೇಲೂ ಇದು ಪರಿಣಾಮ ಬೀರಿದೆ. ಜಿಲ್ಲೆಗೆ ಪ್ರತಿ ವರ್ಷ ಸುಮಾರು 12 ಲಕ್ಷ ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಅನೇಕ ಪ್ರಮುಖ ತಾಣಗಳು ಕಾವೇರಿ ಮತ್ತು ಶಿಂಶಾ ತೀರದಲ್ಲಿವೆ. ಬೃಂದಾವನ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆ ಶೇ 8 ರಿಂದ 10 ರಷ್ಟು ಕುಸಿದಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.  ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲೂ ಇದೇ ರೀತಿಯ ಪರಿಣಾಮ ಉಂಟಾಗಿದೆ ಎಂದು ತಿಳಿದುಬಂದಿದೆ.