2024ರೊಳಗೆ ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬಲಿದ್ದೇವೆ; ಅಮಿತ್ ಶಾ

ಚಂಡೀಗಡ, ಅ 10:     ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು  ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ  ಕೇಂದ್ರದ  ಬಿಜೆಪಿ  ಸರ್ಕಾರ ಶೀಘ್ರದಲ್ಲೇ ದೇಶಾದ್ಯಂತ ಅದನ್ನು ಜಾರಿಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ.   

ಈ ಸಂಬಂಧ   ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳು ಸಾಕಷ್ಟು ಸಂದೇಶಗಳನ್ನು ರವಾನಿಸುತ್ತಿದ್ದು, ದೇಶದಲ್ಲಿ ಮತ್ತೊಂದು ರಾಜಕೀಯ ಬಿರುಗಾಳಿ ವಾತಾವರಣದ ಸಾಧ್ಯತೆಗಳು ನಿಚ್ಚಳವಾಗಿ  ಕಂಡುಬರುತ್ತಿವೆ. ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಗೃಹ ಸಚಿವ ಅಮಿತ್ ಶಾ ಎನ್ಆರ್ಸಿ ಬಗ್ಗೆ ಅತ್ಯಂತ ಮಹತ್ವದ ಹೇಳಿಕೆ ನೀಡುತ್ತಿದ್ದಾರೆ.  2024ರ ಲೋಕಸಭಾ ಚುನಾವಣೆ ವೇಳೆಗೆ ದೇಶದಲ್ಲಿವ ಎಲ್ಲ ಅಕ್ರಮ ವಲಸಿಗರನ್ನು  ದೇಶದಿಂದ ಹೊರದಬ್ಬಲಾಗುವುದು ಎಂದು ಘೋಷಿಸಿದ್ದಾರೆ. 

ಹರಿಯಾಣದ ಕಥಿಯಾಲ್  ನಡೆದ ಸಾರ್ವಜನಿಕ ಸಭೆಯಲ್ಲಿ  ಮಾತನಾಡಿದ ಅಮಿತ್ ಶಾ, 370 ನೇ ವಿಧಿಯನ್ನು ರದ್ದುಗೊಳಿಸಲು ಸಾಕಷ್ಟು ತಾಕತ್ತು ಬೇಕು. ಅಂತಹ ಧೈರ್ಯ, ತಾಕತ್ತು  ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ  ಸಮೃದ್ಧವಾಗಿದೆ ಎಂದರು. 

 2024ರ ಸಾರ್ವತ್ರಿಕ ಚುನಾವಣೆಗೆ ಮತ್ತೊಮ್ಮೆ ಮತ ಯಾಚಿಸಲು ನಿಮ್ಮ ಮುಂದೆ  ನಾವು ಬರುತ್ತೇವೆ. ಆದರೆ, ಅಷ್ಟೊರೊಳಗೆ ದೇಶದಲ್ಲಿರುವ ಎಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಿ ಜನರ ಮುಂದೆ ನಿಲ್ಲುತ್ತೇವೆ ಎಂದು ಘೋಷಿಸಿದ್ದಾರೆ. ಕಳೆದ 70 ವರ್ಷಗಳಿಂದ, ಅಕ್ರಮ ವಲಸಿಗರು ನಮ್ಮ ದೇಶದ  ಜನರ ಎಲ್ಲಾ ಸೌಕರ್ಯಗಳನ್ನು ಅನುಭವಿಸಿ, ಧೈರ್ಯವಾಗಿ ನೆಲೆಸಿದ್ದಾರೆ. ಈ ಅಕ್ರಮ ವಲಸಿಗರು ಇನ್ನು ಮುಂದೆ ದೇಶದಲ್ಲಿ ಇರುವುದಿಲ್ಲ. ಇರಲು ಬಿಜೆಪಿ ಬಿಡುವುದೂ ಇಲ್ಲ. ಬಿಜೆಪಿ ಮತ್ತು  ಪ್ರಧಾನಿ ನರೇಂದ್ರ ಮೋದಿ ಅವರು  ದೇಶದ ಜನರಿಗೆ ಈಗಾಗಲೇ  ಈ ಸಂಬಂಧ ಭರವಸೆ ನೀಡಿದೆ ಎಂದು ಹೇಳಿದರು. 

ರಾಷ್ಟ್ರದ ಭದ್ರತೆ ವಿಷಯಗಳ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ  ನಿಲುವನ್ನು ಅಮಿತ್  ಶಾ ಟೀಕಿಸಿದರು. ತ್ರಿವಳಿ ತಲಾಖ್ ನಿಷೇಧ,  370ನೇ ವಿಧಿ ರದ್ದತಿ ಮತ್ತು ಅಕ್ರಮ ವಲಸಿಗರ ಸಮಸ್ಯೆ ಈ ಎಲ್ಲ ವಿಷಯಗಳಲ್ಲೂ  ಕಾಂಗ್ರೆಸ್ ಭಿನ್ನ ನಿಲುವು ಹೊಂದಿದೆ ಅವರು ಟೀಕಿಸಿದರು.