ಕೊಪ್ಪಳದಲ್ಲಿ ಮುಂದುವರಿದ ಅಕ್ರಮ ಕಲ್ಲು ಗಣಿಗಾರಿಕೆ: ಶಾಸಕ, ಸಂಸದರ ವಿರುದ್ಧ ಬಿಜೆಪಿ ಆಕ್ರೋಶ
Illegal stone mining continues in Koppal: BJP expresses anger against MLA, MP
ಕೊಪ್ಪಳ 25: ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿರಂತರವಾಗಿ ಮುಂದುವರಿದಿದ್ದು, ಇದರಿಂದ ಕೊಪ್ಪಳ ಭೂಮಿಯ ಒಡಲು ನಡುಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹೊರತಟ್ನಾಳ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಕಲ್ಲು ಹಾಗೂ ಗ್ರಾನೈಟ್ ಗಣಿಗಾರಿಕೆಗಳು ಪ್ರಮುಖ ಸಮಸ್ಯೆಗಳಾಗಿ ಪರಿಣಮಿಸಿವೆ ಎಂದು ಇಲಾಖೆಗಳ ವಿರುದ್ಧ ಹರಿಹಾಯ್ದರು. ಜಿಲ್ಲೆಯ ನೈಸರ್ಗಿಕ ಸಂಪತ್ತು ಮತ್ತು ಪರಿಸರದ ಮೇಲೆ ಇದು ತೀವ್ರವಾಗಿ ದುಷ್ಪರಿಣಾಮ ಬೀರುತ್ತಿದ್ದು, ಸ್ಥಳೀಯರು ಮತ್ತು ವಿವಿಧ ಸಂಘಟನೆಗಳು ಇದರ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದರೂ ಯಾವುದೇ ಕಾನೂನು ಕ್ರಮ ಜರುಗುತ್ತಿಲ್ಲ.
ಇದಕ್ಕೆ ನೇರವಾಗಿ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಸಂಸದ ರಾಜಶೇಖರ್ ಹಿಟ್ನಾಳ್ ಅವರೇ ಕಾರಣ ಎಂದು ಅವರು ನೇರ ಆರೋಪ ಮಾಡಿದರು.ಜಿಲ್ಲೆಯ ಪ್ರಮುಖ ಕುಡಿಯುವ ನೀರಿನ ಮೂಲವಾದ ತುಂಗಭದ್ರಾ ನದಿಯ ಒಡಲಿನಲ್ಲಿ ಜೆಸಿಬಿ ಹಾಗೂ ಭಾರಿ ಯಂತ್ರಗಳನ್ನು ಬಳಸಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಹಗಲಿಗಿಂತ ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಮರಳನ್ನು ಅಕ್ರಮವಾಗಿ ಲೂಟಿ ಮಾಡಿ ಸಾಗಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ನದಿ ತೀರದ ಗ್ರಾಮಗಳ ರೈತರ ಕೃಷಿ ಚಟುವಟಿಕೆಗಳ ಮೇಲೆಯೂ ಇದು ತೀವ್ರ ಪರಿಣಾಮ ಬೀರಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನವಲಿ ಸೇರಿದಂತೆ ಹಲವು ಗ್ರಾಮಗಳ ನದಿ ತೀರಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮ ದಂಧೆ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದರೂ ಅಧಿಕಾರಿಗಳಿಂದ ಅದ್ಯಾವುದೂ ಪ್ರಯೋಜನವಾಗುತ್ತಿಲ್ಲ ಎಂದು ಅವರು ದೂರಿದರು.ಇತ್ತೀಚೆಗೆ ಕೊಪ್ಪಳ ತಾಲೂಕಿನ ಶಿವಪುರ, ಬಂಡಿಹರ್ಲಾಪುರ, ಬಸಾಪುರ ಹಾಗೂ ಹುಸೇನಪುರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಸಂಯುಕ್ತ ತಂಡಗಳು ಭಾರಿ ದಾಳಿ ನಡೆಸಿ, ಅಕ್ರಮವಾಗಿ ಬಳಸುತ್ತಿದ್ದ ಹಲವಾರು ಟ್ರ್ಯಕ್ಟರ್, ಟಿಪ್ಪರ್ ಹಾಗೂ ಜೆಸಿಬಿ ಸೇರಿದಂತೆ ನೂರಾರು ವಾಹನಗಳನ್ನು ಜಪ್ತಿ ಮಾಡಿವೆ.
ಆದರೆ, ಅಧಿಕಾರಿಗಳು ವಾಹನಗಳನ್ನಷ್ಟೇ ಜಪ್ತಿ ಮಾಡಿದ್ದು, ಅಕ್ರಮ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಯಾವುದೇ ಆದೇಶ ಮಾಡಿಲ್ಲ. ಜಿಲ್ಲೆಯ ಹಲವು ಗುಡ್ಡಗಾಡು ಪ್ರದೇಶಗಳಲ್ಲಿ ಅನಧಿಕೃತವಾಗಿ ಬೆಲೆಬಾಳುವ ಗ್ರಾನೈಟ್ ಕಲ್ಲುಗಳನ್ನು ಗಣಿಗಾರಿಕೆ ಮಾಡಿ ಕಳ್ಳಸಾಗಣೆ ಮಾಡುವ ಗ್ರಾನೈಟ್ ಮಾಫಿಯಾ ಸಕ್ರಿಯವಾಗಿದೆ. ಈ ಅಕ್ರಮ ಮರಳುಗಾರಿಕೆಯಿಂದಾಗಿ ಜಿಲ್ಲೆಯ ನೈಸರ್ಗಿಕ ಸಂಪತ್ತು ಸಂಪೂರ್ಣ ಹಾಳಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಿ ತಕ್ಷಣವೇ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಗಣೇಶ ಹೊರತಟ್ನಾಳ್ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು, ಸಂಸದ ರಾಜಶೇಖರ್ ಹಿಟ್ನಾಳ್ ಅವರು ಸಾರ್ವಜನಿಕ ವಲಯದಲ್ಲಿ ತಾವೊಬ್ಬ ಸಂಸದರಾಗಿ ಹೇಗೆ ಹೇಳಿಕೆ ನೀಡಬೇಕು ಎನ್ನುವುದನ್ನು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸ್ವತಃ ಕರ್ನಾಟಕ ಸರ್ಕಾರವೇ ಒನ್ ಟೈಮ್ ಸೆಟಲ್ಮೆಂಟ್ ಅಡಿಯಲ್ಲಿ ಆರು ತಿಂಗಳ ಒಳಗಾಗಿ ರಾಜಸ್ವ ಹಣ ಪಾವತಿಸಲೇಬೇಕು ಎಂದು ಆದೇಶ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಸದರು ಸರ್ಕಾರದ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವುದು
ಎಷ್ಟರಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದ ಅವರು, ಸಂಸದರು ತಮ್ಮ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಮರೇಶ್ ಮುರಳಿ, ಜಿಲ್ಲಾ ವಕ್ತಾರ ಮಹೇಶ್ ಹಾದಿಮನಿ, ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಬಿ. ಗೋಡೆಕರ್ ಹಾಗೂ ಅಂದಪ್ಪ ನೀರಲಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 