ಬೆಂಗಳೂರು, ಫೆ 6 : ಲೈಟ್ ಫಿಶಿಂಗ್ ಮತ್ತು ಟ್ರಾಲಿಂಗ್ ಮೀನುಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಿದ್ದು, ಕಾನೂನು ಉಲ್ಲಾಂಘಿಸುವ ಮೂಲಕ ಅಕ್ರಮವಾಗಿ ಮೀನುಗಾರಿಕೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜರತ್ನ ಸುನಿಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲಿಂಗ್ ಮೀನುಗಾರಿಕೆಯಿಂದ ನಾಡದೋಣಿ ಮೀನುಗಾರಾರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಆರು ಲಕ್ಷಕ್ಕೂ ಅಧಿಕ ಜನರು ಇದನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲಿ ಮೀನುಗಾರಿಕೆ ಅಕ್ರಮವಾಗಿ ಮುಂದುವರೆದರೆ ನಾಡ ದೋಣಿ ಮೀನುಗಾರರ ಲಕ್ಷಾಂತರ ಕುಟುಂಬಗಳು ನಷ್ಟ ಅನುಭವಿಸುತ್ತದೆ. ಜತೆಗೆ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಹಾದಿಹಿಡಿಯಬೇಕಾಗುತ್ತದೆ. ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಹಾಗೂ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಈ ವಿಚಾರ ತಂದಿದ್ದು, ಕೂಡಲೇ ಕಾರ್ಯ ಪ್ರವೃತ್ತರಾಗಿ ವಿಶೇಷ ತನಿಖಾ ತಂಡ ರಚಿಸಿ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು. ಹಾಗೊಂದು ವೇಳೆ ಸರ್ಕಾರ ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.