ಅಕ್ರಮ ಸಕ್ರಮ: ಮುಂದಿನ ಸರದಿ ಬೀದರ್, ರಾಯಚೂರು, ಕಲಬುರಗಿ

ಬೆಂಗಳೂರು, ಜ 28 :     ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿ ವ್ಯಕ್ತಿಗೂ ವಾಸಕ್ಕೆ ಸೂಕ್ತ ಸೂರು ಕಲ್ಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಂದಾಯ ಇಲಾಖೆ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಕ್ರಮ-ಸಕ್ರಮ ಯೋಜನೆಯಡಿ ೧೦ ಸಾವಿರ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಜಮೀನಿನಲ್ಲಿ ಅನಧಿಕೃತ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಸಕ್ರಮದ ಆದೇಶವನ್ನು ನೀಡಿ, ಸೂರು ಕಲ್ಪಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ಮಾಜಿ ಸೈನಿಕರುಗಳಿಗೆ ಸಕ್ರಮ ಮಾಡಲು ಗರಿಷ್ಟ 15 ಸಾವಿರ ರೂ, ಇತರರಿಗೆ 30 ಸಾವಿರ ರೂ ಶುಲ್ಕ ವಿಧಿಸಲಾಗಿದೆ ಎಂದರು.

          ನಗರ ಪ್ರದೇಶದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಅಂಗವಿಕಲರಿಗೆ, ಮಾಜಿ ಸೈನಿಕರುಗಳಿಗೆ ಗರಿಷ್ಠ 2,500 ರೂ, ಇತರರಿಗೆ ಗರಿಷ್ಠ 5000 ರೂ ಶುಲ್ಕ ಪಡೆದು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಯಾವುದೇ ಹೊರೆಯಾಗದಂತೆ ಸೂರು ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಿ ಅದನ್ನು ಸರ್ಕಾರ ವಶಪಡಿಸಿಕೊಂಡು ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

    ಕಂದಾಯ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಅಕ್ರಮ -ಸಕ್ರಮಕ್ಕೆ ಒಟ್ಟು ೩ ಲಕ್ಷ ಅರ್ಜಿಗಳು ಬಂದಿದ್ದು, ಅದರಲ್ಲಿ ೬೦ ಸಾವಿರ ಜನರಿಗೆ ಹಕ್ಕುಪತ್ರ ನೀಡುತ್ತೇವೆ. ಅಲ್ಲದೇ ಮಂಗಳೂರು, ಬೀದರ್, ರಾಯಚೂರು ಹಾಗೂ ಕಲ್ಬುರ್ಗಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹಕ್ಕುಪತ್ರ ನೀಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಸಂಸದರಾದ ಪಿ.ಸಿ.ಮೋಹನ್, ಎಸ್.ಮುನಿಸ್ವಾಮಿ, ಶಾಸಕರಾದ ಎಸ್.ಟಿ.ಸೋಮಶೇಖರ್, ಉದಯ್ ಬಿ.ಗರುಡಾಚಾರ್ ಮತ್ತಿತರರು ಉಪಸ್ಥಿತರಿದ್ದರು.