ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ, ಹಣ ಮತ್ತು ಸಮಯ ಎರಡು ಉಳಿತಾಯ: ನ್ಯಾಯಾಧೀಶೆ ಶಾಂತಮ್ಮಾ

ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ, ಹಣ ಮತ್ತು ಸಮಯ ಎರಡು ಉಳಿತಾಯ: ನ್ಯಾಯಾಧೀಶೆ ಶಾಂತಮ್ಮಾ If cases are settled through conciliation, both money and time are saved: Judge Shanthamma

ಲೋಕದರ್ಶನ ವರದಿ 

ಮೂಡಲಗಿ 14 : ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ನ್ಯಾಯಾಲಯದಲ್ಲಿ ನಡೆಯುವ ಲೋಕಅದಾಲತ್‌ದಲ್ಲಿ ರಾಜಿ ಸಂದಾನದ ಮೂಲಕ ತಮ್ಮ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ, ಹಣ ಮತ್ತು ಸಮಯ ಎರಡು ಉಳಿತಾಯವಾಗುತ್ತದೆ ಎಂದು ನ್ಯಾಯಾಧೀಶೆ ಶಾಂತಮ್ಮಾ ಮಲ್ಲಿಕಾರ್ಜುನಗೌಡ ಪಿ. ಅವರು ಹೇಳಿದರು. 

ಸ್ಥಳಿಯ ಹಿರಿಯ ದಿವಾಣಿ ಹಾಗೂ ಜೆ.ಎಮ್‌.ಎಫ್‌.ಸಿ. ನ್ಯಾಯಾಲಯದಲ್ಲಿ ನಡೆದ, ಲೋಕಅದಾಲತ್‌ನಲ್ಲಿ ಕಕ್ಷಿದಾರರು ಹಾಗು ವಕೀಲರ ಸಹಕಾರದಿಂದ ನ್ಯಾಯಾಲಯದಲ್ಲಿ ವಿಚಾರಣೆಗಿದ್ದ ಪ್ರಕರಣಗಳ ಪೈಕಿ 38 ಸಿವಿಲ್ ಪ್ರಕರಣಗಳು, 374 ಕ್ರಿಮಿನಲ್ ಪ್ರಕರಣಗಳು ಒಟ್ಟು 412 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಂಡಿವೆ. ವರ್ಷಗಟ್ಟಲೆ ಕಾನೂನು ಸಮರ ನಡೆಸುತ್ತಿರುವ ಬಡ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಆರಂಭವಾದ ಲೋಕಅದಾಲತ್ ಸಾಕಷ್ಟು ಯಶಸ್ವಿ ಕಾಣುತ್ತಿದೆ. 

ನ್ಯಾಯಾಲಯದ ಅಲೆದಾಟ, ದೀರ್ಘಾವಧಿಯ ಕಾಯುವಿಕೆ ಹಾಗೂ ಆರ್ಥಿಕ ಹೊರೆಯಿಂದ ಬಳಲುತ್ತಿದ್ದ ಕಕ್ಷಿದಾರರಿಗೆ ಈ ಲೋಕ ಅದಾಲತ್ ವರದಾನವಾಗಿ ಪರಿಣಮಿಸಿದೆ. ಸಣ್ಣಪುಟ್ಟ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಅನೇಕ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಈ ವೇದಿಕೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. 

ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಪ್ರಕರಣಗಳು ವಿಲೇವಾರಿಯಾಗಿರುವುದು ಮೂಡಲಗಿ ನ್ಯಾಯಾಲಯದ ತ್ವರಿತ ಕಾರ್ಯನಿರ್ವಹಣೆಗೆ ಕನ್ನಡಿ ಹಿಡಿದಿದೆ. ಈ ಪ್ರಕ್ರಿಯೆಯಲ್ಲಿ ವಕೀಲರು, ಕಕ್ಷಿದಾರರು ಸಕ್ರಿಯವಾಗಿ ಪಾಲ್ಗೊಂಡು ಲೋಕ ಅದಾಲತ್ ಯಶಸ್ಸಿಗೆ ಕಾರಣರಾದರು.