ಇಂದೂ ನಟಿ ರಶ್ಮಿಕಾ ವಿಚಾರಣೆ ನಡೆಸಲಿರುವ ಐಟಿ ಅಧಿಕಾರಿಗಳು

ಮಡಿಕೇರಿ, ಜ. 17,ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಕೂಡ ರಶ್ಮಿಕಾ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.ಕಳೆದ ರಾತ್ರಿ ರಶ್ಮಿಕಾ ಚೆನ್ನೈಯಿಂದ ಕೊಡಗು ಜಿಲ್ಲೆಯ ವೀರಾಜಪೇಟೆಯ ಕುಕ್ಲೂರಿನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಕೆಲವು ಹೊತ್ತು ಅವರನ್ನು ಅಧಿಕಾರಿಗಳು ವಿಚಾರಣೆಗೆ ನಡೆಸಿದ್ದರು. ಬಳಿಕ ನಾಳೆ ವಿಚಾರಣೆ ನಡೆಸುವುದಾಗಿ ಹೇಳಿ, ಅಧಿಕಾರಿಗಳು ಮನೆಯಿಂದ ತೆರಳಿ ಸೆರೆನಿಟಿ ಹಾಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.ವಿರಾಜಪೇಟೆಯಲ್ಲಿ ಕುಕ್ಲೂರಲ್ಲಿ ಐಷಾರಾಮಿ ಬಂಗಲೆ, ಮೈತಾಡಿ ಗ್ರಾಮದಲ್ಲಿ ಮೂರು ಎಕರೆ ಕಾಫಿ ತೋಟ, ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಸೇರಿದಂತೆ ಕೋಟ್ಯಂತರ ರೂಪಾಯಿ  ಆಸ್ತಿ ರಶ್ಮಿಕಾ ಮತ್ತು ಅವರ ತಂದೆಯ ಹೆಸರಿನಲ್ಲಿದೆ. ಆದರೆ ಇವುಗಳಿಗೆ ಸಮರ್ಪಕ ದಾಖಲೆಗಳನ್ನು ಒದಗಿಸಿರಲಿಲ್ಲ. ಮಾತ್ರವಲ್ಲ ರಶ್ಮಿಕಾ ತಂದೆ ಮದನ್ ಮಂಜಣ್ಣ, ಪೆಟ್ರೋಲ್ ಬಂಕ್, ಶಾಲೆ ನಿರ್ಮಾಣಕ್ಕೆ ಯೋಚಿಸಿದ್ದರು. ವಿರಾಜಪೇಟೆಯಲ್ಲಿ ಸೆರಿನಿಟ್ ಹಾಲ್ ಹೆಸರಿನ ಐಷಾರಾಮಿ ಕಲ್ಯಾಣ ಮಂಟಪವಿದ್ದು ಇಲ್ಲಿನ ಒಂದು ದಿನದ ಬಾಡಿಗೆಯೇ ಒಂದೂವರೆ ಲಕ್ಷ ರೂಪಾಯಿ. ವರ್ಷದ ಹಿಂದೆಯಷ್ಟೇ ವಿರಾಜಪೇಟೆಯ ವಿಜಯನಗರದಲ್ಲಿರುವ ಮನೆಯನ್ನು ರಶ್ಮಿಕಾ ತಂದೆ ಒಂದೂವರೆ ಕೋಟಿ ರೂಪಾಯಿಗೆ ಮಾರಿದ್ದರು. ಇವುಗಳ ಬಗ್ಗೆ ಮಾಹಿತಿ ಪಡೆದಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಶ್ಮಿಕಾ ಅವರ ಅಭಿಮಾನಿಗಳ ಸೋಗಿನಲ್ಲಿ ಮನೆಗೆ ಬಂದು ಪರಿಶೀಲಿಸಿದ್ದರು. ಚೆನ್ನೈಯಲ್ಲಿ ಶೂಟಿಂಗ್‌ನಲ್ಲಿದ್ದ ನಟಿಯನ್ನು ತಕ್ಷಣ ಬರುವಂತೆ ಮೆಮೊ ಕಳುಹಿಸಿ ಕರೆಸಿಕೊಂಡಿದ್ದಾರೆ.ಇಂದು ಬೆಳಗ್ಗೆ 10 ಗಂಟೆಯಿಂದ ರಶ್ಮಿಕಾ ಅವರನ್ನು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.