ಐಟಿ ದತ್ತಾಂಶ ಆಧಾರಿತ ಕಾರ್ಯಾಚರಣೆ: ಬಳ್ಳಾರಿಯಲ್ಲಿ 4,764 ಅನರ್ಹ ಬಿಪಿಎಲ್ ಕಾರ್ಡ್‌ ರದ್ದುಅನ್ನಭಾಗ್ಯ ದುರುಪಯೋಗಕ್ಕೆ ಕಡಿವಾಣ; ಡಿಜಿಟಲ್ ಪರೀಶೀಲನೆಗೆ ಸಿಕ್ಕಿಬಿದ್ದ ಸಾವಿರಾರು ಅನರ್ಹರು

ಐಟಿ ದತ್ತಾಂಶ ಆಧಾರಿತ ಕಾರ್ಯಾಚರಣೆ: ಬಳ್ಳಾರಿಯಲ್ಲಿ 4,764 ಅನರ್ಹ ಬಿಪಿಎಲ್ ಕಾರ್ಡ್‌ ರದ್ದುಅನ್ನಭಾಗ್ಯ ದುರುಪಯೋಗಕ್ಕೆ ಕಡಿವಾಣ; ಡಿಜಿಟಲ್ ಪರೀಶೀಲನೆಗೆ ಸಿಕ್ಕಿಬಿದ್ದ ಸಾವಿರಾರು ಅನರ್ಹರು IT data-based operation: 4,764 ineligible BPL cards cancelled in Bellary, curbing food fraud; Thousa

ಬಳ್ಳಾರಿ 18:  ನಗರದಲ್ಲಿ ಬಡವರಿಗಾಗಿ ಜಾರಿಗೊಳಿಸಲಾದ ಬಿಪಿಎಲ್ ಪಡಿತರ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದ ಸಾವಿರಾರು ಅನರ್ಹರ ವಿರುದ್ಧ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಡಿಜಿಟಲ್ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯಾದ್ಯಂತ 4,764 ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ.ಆಹಾರ ಇಲಾಖೆ, ಆದಾಯ ತೆರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಸಮನ್ವಯಗೊಳಿಸಿ ನಡೆಸಿದ ವಿಶೇಷ ಪರೀಶೀಲನೆಯಲ್ಲಿ ಆದಾಯ ತೆರಿಗೆ ಪಾವತಿದಾರರು, ಹೆಚ್ಚಿನ ಆದಾಯ ಹೊಂದಿರುವವರು, ದೊಡ್ಡ ಪ್ರಮಾಣದ ಭೂಮಿ ಹಾಗೂ ಖಾಸಗಿ ನಾಲ್ಕು ಚಕ್ರದ ವಾಹನಗಳ ಮಾಲೀಕರು ಬಿಪಿಎಲ್ ಸೌಲಭ್ಯ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಪ್ರಸ್ತುತ 24,773 ಅಂತ್ಯೋದಯ ಕಾರ್ಡ್‌ ಹಾಗೂ 2,74,280 ಬಿಪಿಎಲ್ ಕಾರ್ಡ್ಗಳು ಚಾಲ್ತಿಯಲ್ಲಿವೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ಸೇರಿದಂತೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಬಿಪಿಎಲ್ ಕಾರ್ಡ್‌ ಪ್ರಮುಖ ದಾಖಲೆ ಆಗಿದೆ. ಆದರೆ ಆರ್ಥಿಕವಾಗಿ ಸದೃಢರಾದವರೂ ಈ ಸೌಲಭ್ಯ ಪಡೆಯುತ್ತಿರುವುದು ಇಲಾಖೆಗೆ ಆತಂಕ ಉಂಟುಮಾಡಿದೆ.ಈವರೆಗೆ ಮನೆಮನೆ ಭೇಟಿ, ಸಾರ್ವಜನಿಕ ದೂರು ಹಾಗೂ ಸ್ಥಳೀಯ ಮಟ್ಟದ ಪರೀಶೀಲನೆಗಳ ಮೂಲಕ ಅನರ್ಹರನ್ನು ಪತ್ತೆಹಚ್ಚಲಾಗುತ್ತಿತ್ತು. ಈ ಬಾರಿ ಇಲಾಖೆ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನ ಬಳಸಿ ಪಡಿತರ ಚೀಟಿಯ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಮತ್ತು ಪ್ಯಾನ್ ಕಾರ್ಡ್‌ ಮಾಹಿತಿಯೊಂದಿಗೆ ತಾಳೆ ಹಾಕಿ ಪರೀಶೀಲನೆ ನಡೆಸಿದೆ.

ಆದಾಯ ತೆರಿಗೆ ಇಲಾಖೆಯಿಂದ ಪಡೆದ ಮಾಹಿತಿಯ ಆಧಾರದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವವರನ್ನು ಗುರುತಿಸಲಾಗಿದ್ದು, ಸಾರಿಗೆ ಇಲಾಖೆಯ ದಾಖಲೆಗಳೊಂದಿಗೆ ಹೋಲಿಕೆ ನಡೆಸಿ ಖಾಸಗಿ ನಾಲ್ಕು ಚಕ್ರದ ವಾಹನ ಹೊಂದಿರುವ ಬಿಪಿಎಲ್ ಕಾರ್ಡ್ಧಾರಕರನ್ನೂ ಪತ್ತೆಹಚ್ಚಲಾಗಿದೆ.ಈ ಡಿಜಿಟಲ್ ಪರೀಶೀಲನೆಯಲ್ಲಿ ಬಳ್ಳಾರಿ ನಗರ ಭಾಗದಲ್ಲಿಯೇ ಗರಿಷ್ಠ 3,960 ಕಾರ್ಡ್ಗಳು ರದ್ದಾಗಿವೆ. ನಗರ ಪ್ರದೇಶಗಳಲ್ಲಿ ಸರ್ಕಾರಿ ನೌಕರರು, ಉದ್ಯಮಿಗಳು ಹಾಗೂ ಆರ್ಥಿಕವಾಗಿ ಸದೃಢ ಕುಟುಂಬಗಳು ಸಹ ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದ ವಿಚಾರ ಬಹಿರಂಗವಾಗಿದೆ.

ಆಹಾರ ಇಲಾಖೆಯ ಪ್ರಕಾರ, ಬಿಪಿಎಲ್ ಕಾರ್ಡ್‌ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಸ್ಪಷ್ಟವಾಗಿವೆ. ಕುಟುಂಬದ ವಾರ್ಷಿಕ ಆದಾಯ ?1.20 ಲಕ್ಷ ಮೀರಿರಬಾರದು. ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ದೊಡ್ಡ ಪಕ್ಕಾ ಮನೆ ಇರಬಾರದು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ಸಮಾನ ಪ್ರಮಾಣದ ನೀರಾವರಿ ಭೂಮಿ ಹೊಂದಿದ್ದರೂ ಅನರ್ಹರಾಗುತ್ತಾರೆ. ಜೀವನೋಪಾಯಕ್ಕಾಗಿ ಬಳಸುವ ಆಟೊ ಅಥವಾ ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ನಾಲ್ಕು ಚಕ್ರದ ವಾಹನ ಹೊಂದಿರುವವರಿಗೂ ಬಿಪಿಎಲ್ ಸೌಲಭ್ಯ ಲಭ್ಯವಿಲ್ಲ. ಆದಾಯ ತೆರಿಗೆ ಅಥವಾ ವೃತ್ತಿ ತೆರಿಗೆ ಪಾವತಿಸುವವರೂ ಅನರ್ಹರಾಗುತ್ತಾರೆ.

ಆದರೂ ಹಲವು ಮಂದಿ ವರ್ಷಗಳಿಂದ ಪಡಿತರ ಸೇರಿದಂತೆ ಉಚಿತ ವೈದ್ಯಕೀಯ ಸೇವೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನ ಪಡೆಯುತ್ತಿರುವುದು ಇದೀಗ ಬಹಿರಂಗವಾಗಿದೆ. ಇದರಿಂದ ನಿಜವಾದ ಬಡ ಕುಟುಂಬಗಳಿಗೆ ಸಿಗಬೇಕಾದ ಸೌಲಭ್ಯಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ತಾಲೂಕುವಾರು ವಿವರದಲ್ಲಿ ಬಳ್ಳಾರಿ ತಾಲೂಕಿನಲ್ಲಿ ಅತಿ ಹೆಚ್ಚು 3,960 ಕಾರ್ಡ್ಗಳು ರದ್ದಾಗಿದ್ದರೆ, ಸಿರಗುಪ್ಪದಲ್ಲಿ 243, ಕುರುಗೋಡಿನಲ್ಲಿ 190, ಸಂಡೂರಿನಲ್ಲಿ 168 ಹಾಗೂ ಕಂಪ್ಲಿಯಲ್ಲಿ 59 ಕಾರ್ಡ್ಗಳನ್ನು ಅನರ್ಹವೆಂದು ಘೋಷಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ದೇವರಾಜ್, “ಜಿಲ್ಲೆಯಲ್ಲಿ ಅನರ್ಹ ಪಡಿತರ ಕಾರ್ಡ್ಗಳನ್ನು ರದ್ದುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದು ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪರೀಶೀಲನೆ ನಡೆಸಿ ಅರ್ಹರಿಗೆ ಮಾತ್ರ ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.ಸರ್ಕಾರದ ಸೌಲಭ್ಯಗಳು ನಿಜವಾದ ಬಡವರ ಕೈ ಸೇರಬೇಕಾದರೆ ಡಿಜಿಟಲ್ ಪರೀಶೀಲನೆ ಹಾಗೂ ಇಲಾಖಾಂತರ ದತ್ತಾಂಶ ಸಮನ್ವಯ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.