ಸಿಡ್ನಿ,ಮಾ 27, ಮುಂಬರುವ ಅಕ್ಟೋಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವ ಸಿದ್ಥತೆ ನಡೆಸಲು ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯು ಅತ್ಯುತ್ತಮ ವೇದಿಕೆಯಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಐಪಿಎಲ್ ಮಾರ್ಚ್ 29 ರಂದು ಮುಂಬಯಿನಲ್ಲಿ ಆರಂಭವಾಗಬೇಕಿತ್ತು. ಆದರೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.
"ಕೊರೊನಾ ವೈರಸ್ ಹರಡುವುದಕ್ಕೂ ಮುನ್ನ ನಮ್ಮ ಆಟಗಾರರು ಐಪಿಎಲ್ ಆಡಲು ಸಾಕಷ್ಟು ಉತ್ಸುಕರಾಗಿದ್ದರು. ಇದೇ ವರ್ಷ ಐಸಿಸಿ ಟಿ20 ವಿಶ್ವಕಪ್ ಇರುವ ಹಿನ್ನೆಲೆಯಲ್ಲಿ ಈ ಟೂರ್ನಿಯು ಮಹತ್ವದ ವೇದಿಕೆಯಾಗಿತ್ತು. ಆದರೆ, ಇದೆಲ್ಲದಕ್ಕೂ ಇದೀಗ ಕೊರೊನಾ ಮಾರಣಾಂತಿಕ ವೈರಸ್ ಅಡ್ಡಿಯಾಗಿದೆ,'' ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ 13ನೇ ಆವೃತ್ತಿಯ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ನಡೆಯುವುದು ಬಹುತೇಕ ಅನುಮಾನವಾಗಿದೆ.