ಬಜೆಟ್ನಲ್ಲಿ ಚಾಲಕರಿಗೆ ಅನ್ಯಾಯ; ರಾಷ್ಟ್ರೀಯ ಚಾಲಕರ ಒಕ್ಕೂಟ ಖಂಡನೆ

ಬೆಂಗಳೂರು,ಮಾರ್ಚ್.9, ರಾಜ್ಯದ ಆಡಳಿತ ಯಂತ್ರದ ಚಾಲನಾ ಶಕ್ತಿಯಾಗಿರುವ ಚಾಲಕರ ಶ್ರೇಯೋಭಿವೃದ್ಧಿಗಾಗಿ ಹಿಂದಿನ ಜೆಡಿಎಸ್ - ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಮೀಸಲಿಟ್ಟಿದ್ದ ಒಟ್ಟು 80 ಕೋಟಿರೂ ಮೊತ್ತದ ಯೋಜನೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೊಳಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಹಿಂದಿನ ಸಮ್ಮಿಶ್ರ ಸರ್ಕಾರ ಸಾರಥಿ ಸೂರಿಗಾಗಿ 50 ಕೋಟಿ ರೂ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ, ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಗಾಗಿ ಪರಿವರ್ತಿಸಲು ಸಹಾಯಧನ ನೀಡಲು 30 ಕೋಟಿ ಹಣವನ್ನು ಮೀಸಲಿಟ್ಟಿತ್ತು. ಮೀಸಲಿಟ್ಟಿದ್ದ ಹಣವನ್ನು ಹಿಂಪಡೆದುಕೊಂಡು ಈಗಿನ ಸರ್ಕಾರ ಈ ಭಾರಿ ಬಜೆಟ್ನಲ್ಲಿ ಆಟೋ ಚಾಲಕರಿಗೆ ಮಾತ್ರ 40 ಕೋಟಿ ರೂ. ಮೀಸಲಿಡುವ ಬಿಜೆಪಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತು ಒಂದು ಕಣ್ಣಿಗೆ ಸುಣ್ಣ ಸುರಿಯುವ ಕೆಲಸ ಮಾಡುತ್ತಿದೆ.

ಓಲಾ ಊಬರ್, ಲಾರಿ ಮತ್ತು ಬಸ್, ಖಾಸಗಿ ವಾಹನ ಚಾಲಕರ ಮನವಿಗೆ ಸ್ಪಂದಿಸದೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದರು. ಹಿಂದಿನ ಸರ್ಕಾರ ಚಾಲಕ ಸಮುದಾಯದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಘೋಷಿಸಿ ವರ್ಷ ತುಂಬುತ್ತಿದ್ದರೂ ಸಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ತಾತ್ಸಾರ ವಹಿಸಲಾಗಿದೆ. ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೆ ತರಬಾರದು ಎಂಬ ರಾಜಕೀಯ ದುರುದ್ದೇಶದಿಂದ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದರು.   ಬೆಂಗಳೂರಿನ ಚಾಲಕರಿಗೆ ಸೂರು ಕಲ್ಪಿಸಲು 'ಸಾರಥಿ ಸೂರು' ಎಂಬ ಬಾಡಿಗೆ ಆಧಾರದ ಯೋಜನೆ ಘೋಷಿಸಿ 50 ಕೋಟಿ ರೂ ನಿಗದಿಪಡಿಸಲಾಗಿತ್ತು. ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ ಆಚರಿಸಿ, ಪ್ರಾಮಾಣಿಕ ಮತ್ತು ಅಪಘಾತ ರಹಿತ ವಾಹನ ಚಾಲನೆ ಮಾಡಿದ ಪ್ರತಿ ಜಿಲ್ಲೆಯ 10 ಚಾಲಕರಿಗೆ ತಲಾ 25 ಸಾವಿರ ಬಹುಮಾನ ನೀಡುವುದಾಗಿ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಯಾವುದೇ ಕಾರ್ಯಕ್ರಮಗಳು ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು. ರಾಜ್ಯ ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಎಳ್ಳು ನೀರು ಬಿಟ್ಟಿರುವುದು ಸರಿಯಲ್ಲ.

ಇದು ಸರ್ಕಾರದ ಕಾರ್ಯಕ್ರಮಗಳ ಘೋಷಣಾ ಪತ್ರ. ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ನಾವು ಏಕೆ ಅನುಷ್ಠಾನಗೊಳಿಸಬೇಕು ಎನ್ನುವ ಉದಾಸೀನ ಧೋರಣೆ ತಳೆದಿರುವುದು ಸರಿಯಲ್ಲ. ಸರ್ಕಾರ ಎನ್ನುವುದು ನಿರಂತರವಾಗಿರುತ್ತದೆ. ಆದರೆ ಬಜೆಟ್ ಕಾರ್ಯಕ್ರಮಗಳು ಶಾಶ್ವತವಾಗಿರುತ್ತವೆ. ಚಾಲಕರಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದ ಯಡಿಯೂರಪ್ಪ ಇಡೀ ಚಾಲಕ ಸಮುದಾಯಕ್ಕೆ ಅನ್ಯಾಯ ಮತ್ತು ಅಪಮಾನ ಮಾಡಿದ್ದಾರೆ ಎಂದು ವಿವರಿಸಿದರು. ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಜಾರಿ ಮಾಡಲು ಸರ್ಕಾರದ ಬಳಿ ಹಣ ಇಲ್ಲವೆ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲಿನ ದ್ವೇಷಕ್ಕೆ ಚಾಲಕರನ್ನು ಬಲಿಕೊಡುತ್ತಿದ್ದೀರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು. ಚಾಲಕರಿಗೆ ಆಗಿರುವ ಅನ್ಯಾಯದ ಬಗ್ಗೆ  ಪ್ರತಿಪಕ್ಷಗಳು ಸರ್ಕಾರದ ಲೋಪಗಳನ್ನು ಬಯಲಿಗೆಳೆದು ಚಾಲಕ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮನವಿ ಪತ್ರ ನೀಡಿದ್ದೇವೆ.  ಸದನದಲ್ಲಿ ಚಾಲಕರ ಬಗ್ಗೆ ಚರ್ಚೆಮಾಡುವಂತೆ  ಮನವಿ ಮಾಡಲಾಗಿದೆ ಎಂದು ಗಂಡಸಿ ಸದಾನಂದ ಸ್ವಾಮಿ ತಿಳಿಸಿದರು. ಪತ್ರಿಕಾ ಗೋಷ್ಠಿಯದಲ್ಲಿ ರಾಷ್ಟ್ರೀಯ ಚಾಲಕರ ಒಕ್ಕೂಟ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ನಾರಾಯಣ ಸ್ವಾಮಿ ನಮ್ಮ ಚಾಲಕರ ಟ್ರೇಡ್ ಯೂನಿಯನ್ನ ಅಧ್ಯಕ್ಷ ಕೆ. ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.