ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಒತ್ತು-ಜನತೆಗೆ ತೆರಿಗೆ ಬರೆ…!

ಬೆಂಗಳೂರು, ಮಾರ್ಚ್.5,  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಜನ ಸಾಮಾನ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ನಲ್ಲಿ ಬರೆ ಎಳೆದಿದ್ದಾರೆ.  ಪೆಟ್ರೋಲ್ ಮೇಲಿನ ದರವನ್ನು ಶೇ.32 ರಿಂದ 35ಕ್ಕೂ, ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ.21 ರಿಂದ 24ಕ್ಕೂ ಏರಿಕೆಯ ಪ್ರಸ್ತಾಪ ಮಾಡಲಾಗಿದೆ.  ಇದೇ ಪರಿಣಾಮವಾಗಿ ಇನ್ನುಮುಂದೆ ಒಂದು ಲೀಟರ್ ಪೆಟ್ರೋಲಿಗೆ 1.60 ಪೈಸೆ, ಡೀಸೆಲ್ ಗೆ 1.59 ಪೈಸೆ ಹೆಚ್ಚಾಗಲಿದೆ.   ಮದ್ಯದ ಮೇಲೆ ಹಾಲಿ ಇರುವ ತೆರಿಗೆ ಮೇಲೆ ಶೇ.6 ರಷ್ಟು ಹೊಸ ಅಬಕಾರಿ ತೆರಿಗೆ ವಿಧಿಸಲಾಗಿದ್ದು, ಪಾನಪ್ರತಿಯರಿಗೂ ಒಂದು ರೀತಿಯ ಕಸಿವಿಸಿ ಉಂಟುಮಾಡಿ, ಅವರ ಜೇಬಿಗೂ ನೇರ ಕೈ ಹಾಕಿದ್ದಾರೆ. ಮಂದಗತಿಯ ಆರ್ಥಿಕ ಹಿನ್ನೆಲೆಯ ಕಾರಣ ಹೊಸ ಸಂಪನ್ಮೂಲ ಕ್ರೂಢೀಕರಿಸಲು ಇರುವ ಸೀಮಿತ ಅವಕಾಶಗಳನ್ನು ಮುಖ್ಯಮಂತ್ರಿಗಳು ಬಳಕೆ ಮಾಡಿಕೊಂಡಿದ್ದಾರೆ.   2020-21ನೇ ಸಾಲಿನ ಆಸನ ಸಾಮರ್ಥ್ಯ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರದ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪದದ ವಾಹನಗಳ ಪ್ರತಿ ಆಸನಕ್ಕೂ 900 ರೂಪಾಯಿ ಮೋಟಾರು ವಾಹನ ತೆರಿಗೆ ವಿಧಿಸಲಾಗಿದೆ.   ಈ ಮೂಲಕ ಸಾರಿಗೆ, ಪೆಟ್ರೋಲ್ ಮತ್ತು ಅಬಕಾರಿ ವಲಯದ ಮೂಲಗಳಿಂದ ಹೆಚ್ಚಿನ ಆರ್ಥಿಕ ಸಂಪನ್ಮೂಲ ಸಂಗ್ರಹಣೆಗೆ ಮುಖ್ಯಮಂತ್ರಿಗಳು ಕೈ ಹಾಕಿದ್ದಾರೆ.