ನವದೆಹಲಿ, ಜೂನ್ ೧೧, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ೨೦೨೦ರ ಸಾಲಿಗೆ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ವಿಶ್ವವಿದ್ಯಾಲಯಗಳು, ಕಾಲೇಜುಗಳಿಗೆ ಸಂಬಂಧಿಸಿದ ಶ್ರೇಯಾಂಕಗಳನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಮೊದಲ ಸ್ಥಾನದಲ್ಲಿದೆ. ಈ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರು ಟ್ವಿಟ್ಟರ್ ನಲ್ಲಿ ಗುರುವಾರ ವೆಬ್ ಕಾಸ್ಟ್ ಮೂಲಕ ಆನ್‌ಲೈನ್ ನಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾನವಸಂಪನ್ಮೂಲ ಅಭಿವೃದ್ದಿ ರಾಜ್ಯ ಸಚಿವ ಸಂಜಯ್ ಧೋತ್ರೆ, ಎಐಸಿಟಿಐ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಹಾಗೂ ಯುಜಿಸಿ ಅಧ್ಯಕ್ಷ ಡಿ.ಪಿ.ಸಿಂಗ್ ಉಪಸ್ಥಿತರಿದ್ದರು.
ಉನ್ನತ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ ಬೆಂಗಳೂರು) ಎರಡನೇ ಸ್ಥಾನಪಡೆದುಕೊಂಡಿದೆ. ಐಐಟಿ ದೆಹಲಿ ಮೂರನೇ ಸ್ಥಾನದಲ್ಲಿದೆ. ಐಐಟಿ ಬಾಂಬೆ, ಐಐಟಿ ಖರಗ್‌ಪುರ ಮತ್ತು ಐಐಟಿ ಕಾನ್ಪುರ್ ಕ್ರಮವಾಗಿ ನಾಲ್ಕನೇ, ಐದನೇ ಮತ್ತು ಆರನೇ ಸ್ಥಾನದಲ್ಲಿವೆ. ಜೆಎನ್‌ಯು ಏಳನೇ ಸ್ಥಾನ, ನವದೆಹಲಿ ಎಂಟನೇ ಸ್ಥಾನ, ಐಐಟಿ ಗುವಾಹಟಿ ಒಂಬತ್ತನೇ ಸ್ಥಾನ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಾರಣಾಸಿ ೧೦ ನೇ ಸ್ಥಾನದಲ್ಲಿದೆ. ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಶ್ರೇಯಾಂಕ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಹಿಂದೆ ನಿರ್ಧರಿಸಿತ್ತು. ಇದರ ಭಾಗವಾಗಿ, ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ೨೦೧೬ ರಿಂದ ಒಂಬತ್ತು ವಿಭಾಗಗಳಲ್ಲಿ ಶ್ರೇಯಾಂಕಗಳನ್ನು ನಿಗದಿಪಡಿಸುತ್ತಿದೆ.