ಐಸಿಎಆರ್‌-ಸಿಎಂಎಫ್‌ಆರ್‌ಐ ಸಂಸ್ಥಾಪನಾ ದಿನ

ಐಸಿಎಆರ್‌-ಸಿಎಂಎಫ್‌ಆರ್‌ಐ ಸಂಸ್ಥಾಪನಾ ದಿನ ICAR-CMFRI Foundation Day

ಲೋಕದರ್ಶನ ವರದಿ 

ಕಾರವಾರ. ಫೆ.5 : ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಅಒಈಖಋ) ಕಾರವಾರ ಪ್ರಾದೇಶಿಕ ಕೇಂದ್ರದಲ್ಲಿ 79 ನೇ ಸಂಸ್ಥಾಪನಾ ದಿನವನ್ನು " ಓಪನ್ ಹೌಸ್" ಪ್ರದರ್ಶನದೊಂದಿಗೆ ಮಂಗಳವಾರ ಆಚರಿಸಲಾಯಿತು. 

ವಲಯ ಅರಣ್ಯಾಧಿಕಾರಿ ಗಜಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬದಲಾಗುತ್ತಿರುವ ವಾತಾವರಣದಲ್ಲಿ ಸಮುದ್ರ ಮೀನುಗಾರಿಕೆ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ತಿಳಿದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. 

 ಕರ್ನಾಟಕ ವಿಶ್ವವಿದ್ಯಾಲಯದ ಪಿಜಿ ಸೆಂಟರ್‌ನ  ಸಾಗರ ಜೀವಶಾಸ್ತ್ರದ ಪ್ರಾಧ್ಯಾಪಕ ಮತ್ತು ಅಧ್ಯಕ್ಷ ಡಾ. ಶಿವಕುಮಾರ್ ಹರ್ಗಿ, ಐಸಿಎಆರ್‌-ಸಿಎಂಎಫ್‌ಆರ್‌ಐ ಕಾರವಾರ ಪ್ರಾದೇಶಿಕ ನಿಲ್ದಾಣ, 2009 ರಿಂದ ಇಂದಿನವರೆಗಿನ ತ್ವರಿತ ಅಭಿವೃದ್ಧಿ, ನಾವೀನ್ಯತೆ ಮತ್ತು ಸಂಶೋಧನಾ ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು. ತಾಂತ್ರಿಕ ಅಧಿವೇಶನದಲ್ಲಿ, ವಿಜ್ಞಾನಿ ತನ್ವೀರ್ ಹುಸೇನ್ ನಿಲ್ದಾಣದ ಪ್ರಮುಖ ಸಾಧನೆಗಳನ್ನು ಪ್ರಸ್ತುತಪಡಿಸಿ, ಸಮುದ್ರ-ಪಂಜರ ಕೃಷಿ, ಕರ್ನಾಟಕ ಕರಾವಳಿಯಲ್ಲಿ ಪಂಜರ ಸಂಸ್ಕೃತಿಯ ಯಶಸ್ಸಿನ ಕಥೆಗಳ ಬಗ್ಗೆ ತಿಳಿಸಿದರು. ವಿಜ್ಞಾನಿಗಳು ಬ್ಯಾಕ್ಟೀರಿಯಾದ ಪ್ರತ್ಯೇಕತೆ ಮತ್ತು ಗುರುತಿಸುವಿಕೆಯನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.  

ಕಾರ್ಯಕ್ರಮದಲ್ಲಿ "ಓಪನ್ ಹೌಸ್", ಮೂಲಕ  ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರದರ್ಶನದಲ್ಲಿ ಜೋಡಿಸಲಾದ ಸಮುದ್ರ ಮಾದರಿಗಳ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಸಮುದ್ರ ಪಂಜರಗಳಲ್ಲಿ ಬೆಳೆಸಲಾದ ವಿವಿಧ ಜೀವಂತ ಮೀನುಗಳನ್ನು  , ಸ್ಥಳೀಯ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವೀಕ್ಷಿಸಿದರು. 

ಈ ಪ್ರದರ್ಶನವು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಮತ್ತು ಸ್ಥಳೀಯ ಸಂದರ್ಶಕರನ್ನು ಆಕರ್ಷಿಸುವುದರ ಜೊತೆಗೆ ಸಂಸ್ಥೆಯ ಅತ್ಯಾಧುನಿಕ ಸಂಶೋಧನೆ, ಇತ್ತೀಚೆಗೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಮತ್ತು ಕರ್ನಾಟಕ ಮತ್ತು ಗೋವಾ ರಾಜ್ಯದಲ್ಲಿ ಸಮುದ್ರ ಮೀನುಗಾರಿಕೆ ವಲಯ ಮತ್ತು ಸಮುದ್ರ ಕೃಷಿಯನ್ನು ಪರಿವರ್ತಿಸುವಲ್ಲಿ ಮತ್ತು ವಿದ್ಯಾರ್ಥಿಗಳು ಸಮುದ್ರ ಜೀವಶಾಸ್ತ್ರ ಮತ್ತು ಮೀನುಗಾರಿಕೆ ವಿಜ್ಞಾನದಲ್ಲಿ ವೃತ್ತಿಜೀವನವನ್ನು ಕೈಗೊಳ್ಳಲು ಪ್ರೇರೇಪಣೆ ನೀಡಿತು. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿನ ಅಪರೂಪದ ಸಮುದ್ರ ಜೀವಿಗಳ ಮಾದರಿಗಳನ್ನು ವೀಕ್ಷಣೆಗೆ ಇಡಲಾಗಿತ್ತು.  

ಕೇಂದ್ರದ ಮುಖ್ಯ ವಿಜ್ಞಾನಿ ಮತ್ತು ಉಸ್ತುವಾರಿ ವಿಜ್ಞಾನಿ ಡಾ. ಕಾಳಿದಾಸ್ ಸ್ವಾಗತಿಸಿದರು, ಡಾ. ಮಹೇಶ್ ವಿ. ವಂದಿಸಿದರು.