ಬೆಂಗಳೂರು, ಸೆ 13 ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಐಬಿಪಿಎಸ್ (ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ) ರಾಷ್ಟ್ರೀಕೃತ ಬ್ಯಾಂಕ್ಗಳ ಕ್ಲರ್ಕ್ ಹುದ್ದೆಗೆ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ನೀಡದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಪರೀಕ್ಷೆ ಬರೆಯಲು ಈ ಮೊದಲು ಇದ್ದ ಸ್ಥಳೀಯ (ಆಔಒಅಐಇ) ನಿಯಮವನ್ನು ವಾಪಸ್ ತರಲಾಗಿಲ್ಲ. ಇದೀಗ ಮಾತೃಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅನುಮತಿ ಕೊಡದೇ ಇರುವುದು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿ. ಕೇಂದ್ರದ ಈ ನೀತಿಯನ್ನು ವಿರೋಧಿಸುವುದಾಗಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಗುರುವಾರ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳಲ್ಲಿ ಮಾತ್ರ ಈ ಪರೀಕ್ಷೆಗಳನ್ನು ಬರೆಯಬಹುದೆಂದು ಸೂಚಿಸಿದೆ. ಐಬಿಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿವಿಧ ಕನ್ನಡ ಸಂಘಟನೆಗಳು ಈ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿವೆ. ಕೆಲವು ದಿನಗಳ ಹಿಂದೆ ರಾಜ್ಯದ ಸಂಸದರ ನಿಯೋಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಬೇಡಿಕೆ ಇಟ್ಟಿದ್ದು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೀಗ ಕೇಂದ್ರ ಸರ್ಕಾರ ಹಳೆಯ ಚಾಳಿಯನ್ನು ಮತ್ತೆ ಮುಂದುವರೆಸಿದೆ ಎಂಬ ಟೀಕೆ ವ್ಯಕ್ತವಾಗಿದೆ.