ಐ ತೀರ್ಪು ಅಧಿಸೂಚನೆ: ರಾಜ್ಯಕ್ಕೆ ಸಿಕ್ಕ ಐತಿಹಾಸಿಕ ಜಯ- ಬಸವರಾಜ್ ಬೊಮ್ಮಾಯಿ

ಕಲಬುರಗಿ, ಫೆ 28  :   ಮಹಾದಾಯಿ ವಿಚಾರದಲ್ಲಿ ಕೇಂದ್ರ ಗೆಜೆಟ್ ಹೊರಡಿಸಿರುವುದು ರಾಜ್ಯಕ್ಕೆ ಸಿಕ್ಕ ಐತಿಹಾಸಿಕ ಜಯ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಇದರ ಶ್ರೇಯಸ್ಸು ಎಲ್ಲಾ ಮಹಾದಾಯಿ ಹೋರಾಟಗಾರರಿಗೆ ಸಲ್ಲಬೇಕು ಎಂದರು.

ಸಿಎಎ ವಿರೋಧಿ ಹೋರಾಟ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹೋರಾಟ ನಡೆಸಲು ಎಲ್ಲರಿಗೂ ಅವಕಾಶವಿದೆ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿ ಹೋರಾಟ ನಡೆದರೇ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಕೇರಳ ಮಾದರಿಯಲ್ಲಿ ಸಿಎಎ ಪರ - ವಿರೋಧ ಹೋರಾಟ ಬ್ಯಾನ್ ವಿಚಾರ ಕುರಿತು ಮಾತನಾಡಿದ ಅವರು, ಈ ತರಹದ ವಿಚಾರ ನಮ್ಮಲ್ಲಿ ಇಲ್ಲ. ಕಾನೂನು ಉಲ್ಲಂಘಿಸಿದರೇ, ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.

ದೊರೆಸ್ವಾಮಿ ಬಗ್ಗೆ ಯತ್ನಾಳ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು ಎಂದ ಅವರು, ಅಧಿವೇಶನ ನಡೆಯಲು ಬಿಡುವುದಿಲ್ಲ ಎನ್ನುವ ಕಾಂಗ್ರೆಸ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. ಅಧಿವೇಶನದಲ್ಲಿ ಅವರು ಚರ್ಚಿಸಲಿ,‌ ಅವರ ಚರ್ಚೆಗೆ ಉತ್ತರಿಸಲು ನಾವೂ ಸಿದ್ಧರಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು,  ದೆಹಲಿಯ ಜೆಎನ್ ಯುನಲ್ಲಿ ಕನ್ಹಯ್ಯ ಕುಮಾರ್ ಘೋಷಣೆಯ ನಂತರ ಇದು ಟ್ರೆಂಡ್ ರೀತಿ ಶುರುವಾಗಿದ್ದು, ಕನ್ಹಯ್ಯ ಹೇಳಿಕೆಗೆ ಹಲವರು ಬೆಂಬಲ ವ್ಯಕ್ತಪಡಿಸಿರುವುದರ ಫಲ ಇದಾಗಿದೆ ಎಂದು ಆರೋಪಿಸಿದರು.

ದೇಶ ವಿರೋಧಿ ಘೋಷಣೆಗೆ ಈಗಿರುವ ಕಾನೂನಿನ ಅಡಿ ಕ್ರಮ ಕೈಗೊಳ್ಳುತ್ತಿದ್ದೇವೆ. ದೇಹದ್ರೋಹಿಗಳಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಬಗ್ಗೆ ಕಾನೂನು ತಿದ್ದುಪಡಿಗೆ ತಜ್ಞರು ಚಿಂತಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.