ನವದೆಹಲಿ, ಡಿ 8 : ಅತ್ಯಾಚಾರ ಪ್ರಕರಣ ಸೇರಿ ಹಲವು ಆರೋಪಗಳಿಗೆ ಒಳಗಾಗಿ ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನ ಸ್ವಾಮಿ ನಿತ್ಯಾನಂದ .... ತನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿರುವ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಧ್ಯಾತ್ಮಿಕ ಗುರುವಾಗಿ ಅನೇಕ ಹೀನ ಕೃತ್ಯಗಳಿಗೆ ಹೆಸರುವಾಸಿಯಾಗಿರುವ ನಿತ್ಯಾನಂದನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಲೆಕ್ಕವಿಲ್ಲದಷ್ಟು ವಿವಾದಗಳಿವೆ. ಈ ಪ್ರಕರಣಗಳ ಭಯದಿಂದ ಎಲ್ಲಿ ತಲೆ ಮರೆಸಿಕೊಂಡಿದ್ದಾನೋ..? ಸಹ ತಿಳಿದಿಲ್ಲ. ಆದರೆ ಹೊಸದಾಗಿ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ಮಾತ್ರ ತನ್ನನ್ನು ಯಾರೂ ಟಚ್ ಮಾಡಲು ಸಾಧ್ಯವಿಲ್ಲ ನಿತ್ಯಾನಂದ ಎಂದು ಹೇಳಿಕೊಂಡಿದ್ದಾನೆ. ಆ ವಿಡಿಯೋ ಪರಿಶೀಲಿಸಿದರೆ.. "ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ಯಾವುದೇ ಅವಿವೇಕಿ ನ್ಯಾಯಾಲಯವೂ ನನ್ನನ್ನು ಪ್ರಾಸಿಕ್ಯೂಟ್ ಮಾಡಲು ಆಗದು... ನಾನು ಪರಮಶಿವ .. ನಾನು ನಿಮಗೆ ಸತ್ಯವನ್ನು ಹೇಳಬಲ್ಲೆ. ಎಂದು ತನ ಶಿಷ್ಯ ಗಣವನ್ನು ಉದ್ದೇಶಿಸಿ ಆತ ಮಾತನಾಡಿದ್ದಾನೆ. ಆದರೆ, ಅದು ಎಲ್ಲಿ, ಯಾವಾಗ ? ಯಾವ ಸಂದರ್ಭದಲ್ಲಿ ಮಾತನಾಡಿದ್ದಾನೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ, ಆದರೆ ವಿಡಿಯೂ ಮಾತ್ರ ವೈರಲ್ ಆಗಿದೆ. ಸ್ವಯಂ ಘೋಷಿತ ಸ್ವಾಮಿ ನಿತ್ಯಾನಂದರಿಗೆ ತಮ್ಮ ದೇಶ ಆಶ್ರಯ ನೀಡಿದೆ ಎಂಬ ವರದಿಗಳನ್ನು ಭಾರತದಲ್ಲಿರುವ ಈಕ್ವೆಡಾರ್ ದೇಶದ ರಾಯಭಾರ ಕಚೇರಿ ನಿರಾಕರಿಸಿದೆ. ಈ ವರದಿಗಳಲ್ಲಿ ಯಾವುದೇ ವಾಸ್ತವವಿಲ್ಲ ಎಂದು ಸ್ಪಷ್ಟಪಡಿಸಿದೆ. ಆಶ್ರಯ ಕೋರಿ ನಿತ್ಯಾನಂದ ಸಲ್ಲಿಸಿರುವ ಆರ್ಜಿಯನ್ನ ತಮ್ಮ ಸರ್ಕಾರ ತಿರಸ್ಕರಿಸಿದೆ. ಇದರೊಂದಿಗೆ ಆತ ಈಕ್ವೆಡಾರ್ನಿಂದ ಹೈಟಿಗೆ ತೆರಳಿದ್ದಾನೆ ಎಂದು ತಿಳಿಸಿದೆ ಈಕ್ವೆಡಾರ್ನಿಂದ ನಿತ್ಯಾನಂದ ದ್ವೀಪವೊಂದನ್ನು ಖರೀದಿಸಿದ್ದಾನೆ ಎಂಬ ಸುದ್ದಿಯನ್ನು ಅದು ನಿರಾಕರಿಸಿದೆ. ನಿತ್ಯಾನಂದನಿಗೆ ತಮ್ಮ ದೇಶ ಯಾವುದೇ ಸಹಾಯ ಒದಗಿಸಿಲ್ಲ. ನಿತ್ಯಾನಂದನಿಗೆ ಸೇರಿದ ಕೈಲಾಸ ವೆಬ್ಸೈಟ್ನಲ್ಲಿನ ಮಾಹಿತಿ ಆಧಾರದ ಮೇಲೆ ಹಲವು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಅದರಲ್ಲಿ ಯಾವುದೇ ಸತ್ಯಾಂಶಗಳು ಇಲ್ಲ, ನಿತ್ಯಾನಂದನಿಗೆ ಸಂಬಂಧಿಸಿದ ವಿಷಯಗಳಲ್ಲಿ ಈಕ್ವೆಡಾರ್ ದೇಶದ ಹೆಸರು ಬಳಸುವುದನ್ನು ಮಾಧ್ಯಮಗಳು ಕೈಬಿಡಬೇಕು ಎಂದು ಅದು ಕೋರಿದೆ. ಈಕ್ವೆಡಾರ್ನಿಂದ ತಾನು ಒಂದು ಸಣ್ಣ ದ್ವೀಪವನ್ನು ಖರೀದಿಸಿರುವುದಾಗಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟಿರುವುದಾಗಿ ನಿತ್ಯಾನಂದ ಘೋಷಿಸಿದ್ದ, ಈ ಸಂಬಂಧ ಒಂದು ವೆಬ್ಸೈಟ್ ಸಹ ಪ್ರಕಟಿಸಿದ್ದ, ಕೈಲಾಸ ರಾಜಕೀಯೇತರ ಹಿಂದೂ ರಾಷ್ಟ್ರವಾಗಿದ್ದು, ಹಿಂದುತ್ವದ ಪುನರುಜ್ಜೀವನದತ್ತ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದ. ಪ್ರಸ್ತುತ ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ, ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.