ವಾಷಿಂಗ್ಟನ್, ಏ ೨೨,ಅಮೆರಿಕಾದಲ್ಲಿ ಕೊರೊನಾ ವೈರಸ್ ನಿಂದ ಉಂಟಾಗುತ್ತಿರುವ ಸಾವು, ನೋವುಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿ ವಿಫಲಗೊಂಡಿದೆ. ಈ ಔಷಧಿ ವಾಸ್ತವವಾಗಿ ಸಾವುಗಳಿಗೆ ಕಾರಣವಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹಾಗೂ ವರ್ಜೀನಿಯಾ ವಿಶ್ವ ವಿದ್ಯಾಲಯ ನಡೆಸಿರುವ ಅಧ್ಯಯನದಲ್ಲಿ ತಿಳಿಸಿವೆ.
ಅಜಿಥ್ರೊಮೈಸಿನ್ ನೊಂದಿಗೆ ಅಥವಾ ಇಲ್ಲದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬಳಕೆಯಿಂದ ಕೋವಿಡ್ -೧೯ ರೋಗಿಗಳಲ್ಲಿ ಕೃತಕ ಉಸಿರಾಟದ ಅಪಾಯ ತಗ್ಗಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡು ಬಂದಿಲ್ಲ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.ಹೊಸ ಅಧ್ಯಯನದ ವಿವರಗಳನ್ನು ಇನ್ನೂ ತಜ್ಞರು ಪರಾಮರ್ಶೆ ನಡೆಸಬೇಕಿದೆ. ವರದಿಯನ್ನು ಸಂಶೋಧಕರಿಗಾಗಿ ಆನ್ ಲೈನ್ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ, ಅಧ್ಯಯನ ವರದಿಯನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ಗೆ ಸಲ್ಲಿಸಲಾಗಿದೆ. ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿಯಿಂದ ರೋಗಿಗಳು ಚೇತರಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಲಭಿಸಿಲ್ಲ ಎಂದು ಹೇಳಿದೆ. "ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯೊಂದನ್ನೇ ಬಳಸಿ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಒಟ್ಟಾರೆ ಸಾವನ್ನಪ್ಪಿದವರ ಪ್ರಮಾಣ ಹೆಚ್ಚು ಎಂದು ಅಧ್ಯಯನ ಗುರುತಿಸಿದೆ. ೩೬೮ ರೋಗಿಗಳ ಮೇಲೆ ನಿಗಾ ವಹಿಸಿ ಅಧ್ಯಯನ ನಡೆಸಲಾಗಿದ್ದು, ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿಜೀವಕ ಅಜಿಥ್ರೊಮೈಸಿನ್ ಅಥವಾ ಅದಿಲ್ಲದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬಳಕೆಯ ಬಗ್ಗೆ ಈವರೆಗೆ ದಾಖಲಾದ ಅತಿದೊಡ್ಡ ಅಧ್ಯಯನ ಇದಾಗಿದೆ.