ಜಪಾನ್ ನಲ್ಲಿ ಹಗಿಬಿಸ್ ಚಂಡಮಾರುತ : ತಗ್ಗಿದ ಅಬ್ಬರ

ಟೋಕಿಯೋ, ಅ 14:       ಜಪಾನ್ ನಲ್ಲಿ ಎರಡು ದಿನಗಳಿಂದ ಭಾರಿ ಪ್ರವಾಹ ಪರಿಸ್ಥಿತಿ ಉಂಟು ಮಾಡಿದ್ದ ಹಗಿಬಿಸ್ ಚಂಡಮಾರುತದ ಅಬ್ಬರ ಇದೀಗ ಕಡಿಮೆಯಾಗುತ್ತಿದೆ.  ಉತ್ತರ ಕರ್ನಾಟಕದ ಜನರು ಅನುಭವಿಸಿದ ಪ್ರವಾಹ ಪರಿಸ್ಥಿತಿಯನ್ನೇ ಈಗ ದೂರದ ಜಪಾನಿನ ಜನರು ಅನುಭವಿಸುತ್ತಿದ್ದಾರೆ. ಹಗಿಬಿಸ್ ಚಂಡಮಾರುತದಿಂದ ಜಪಾನಿನ ಪ್ರಮುಖ 14 ನದಿಗಳು ಉಕ್ಕಿ ಹರಿದು ರಾಜಧಾನಿ ಟೋಕಿಯೋ ಸೇರಿದಂತೆ ಅನೇಕ ನಗರಗಳು ಜಲಾವೃತಗೊಂಡಿವೆ. ಜನರು ಮನೆಯಿಂದ ಹೊರಗೆ ಬಾರದಂತಹ ಸಂದಿಗ್ಧ ಪರಿಸ್ಥಿತಿ ತಲೆದೋರಿದೆ. ಸಂಕಷ್ಟ ಸಿಕ್ಕಿರುವ ಜನರನ್ನು ಪಾರು ಮಾಡಲು ಹೆಲಿಕಾಫ್ಟರ್ ಗಳು, ದೋಣಿಗಳು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.  ಇಲ್ಲಿ ಮಳೆ ಮತ್ತು ಪ್ರವಾಹ ರಾಜ್ಯದ ಜನರನ್ನು ಸಂಕಷ್ಟಕ್ಕೆ ನೂಕಿದ್ದರೆ ದೂರದ ಜಪಾನ್ ನಲ್ಲಿ ಚಂಡಮಾರುತ ಲಕ್ಷಾಂತರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ಸುಮಾರು 70 ಲಕ್ಷ ಜನ ನಿರ್ವಸತಿಕರಾಗಿದ್ದಾರೆ. ಬುಲೆಟ್ ರೈಲು ಸಂಚಾರಕ್ಕೂ ಅಡ್ಡಿಉಂಟು ಮಾಡಿದೆ.  ಇದುವರೆಗಿನ ಅಂಕಿಅಂಶಗಳ ಪ್ರಕಾರ 39 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು 20 ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. 189 ಜನರು ಗಾಯಗೊಂಡಿದ್ದಾರೆ.  3 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 14 ಸಾವಿರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವೂ ಕಡಿತವಾಗಿದೆ.     ಚಂಡಮಾರುತದ ಕಾರಣ ನಿಲ್ಲಿಸಲಾಗಿದ್ದ ರೈಲು ಸೇವೆ ಇದೀಗ ಪುನರಾರಂಭವಾಗಿದೆ. ಸೋಮವಾರದಿಂದ ವಿಮಾನ ಹಾರಾಟ ಪುನರಾರಂಭಿಸುವ ಸಾಧ್ಯತೆ ಇದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.