ಟೋಕಿಯೋ, ಅ.15: ಜಪಾನ್ನಲ್ಲಿ ಬೀಸಿದ ಭೀಕರ ಹಗಿಬಿಸ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 61ಕ್ಕೇರಿದ್ದು, 13 ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಪರಿಗಣಿಸಲಾಗಿದೆ ಎಂದು ಮಂಗಳವಾರ ಮಾಧ್ಯಮ ವರದಿ ಮಾಡಿದೆ. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಫುಜಿ ಟೆಲಿವಿಷನ್ ನೆಟ್ವರ್ಕ್ ತಿಳಿಸಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಚಂಡಮಾರುತ ಹಗಿಬಿಸ್ಗೆ ಬಲಿಯಾದವರ ಸಂಖ್ಯೆ ಈ ಹಿಂದೆ 58 ಎಂದು ಪರಿಗಣಿಸಲಾಗಿತ್ತು. ಹಗಿಬಿಸ್ ಶನಿವಾರ ಜಪಾನ್ಗೆ ಅಪ್ಪಳಿಸಿ, ಧಾರಾಕಾರ ಮಳೆ ಮತ್ತು ಭಾರೀ ಗಾಳಿ ಬೀಸಿದೆ. ನದಿಗಳು ತುಂಬಿ ಹರಿದು ದೇಶಾದ್ಯಂತ ಭಾರಿ ಪ್ರವಾಹಕ್ಕೆ ಕಾರಣವಾಯಿತು. ಚಿಬಾ ಪ್ರಾಂತ್ಯವು ಸುಂಟರಗಾಳಿಯಿಂದ ಹೆಚ್ಚಿನ ನಾಶ ನಷ್ಟಕ್ಕೆ ತುತ್ತಾಗಿದೆ. 37 ನದಿಗಳ ಅಣೆಕಟ್ಟುಗಳು ನಾಶವಾದರೆ, ಜಪಾನಿನ 16 ಪ್ರಾಂತ್ಯಗಳಲ್ಲಿ 161 ನದಿಗಳು ಪ್ರವಾಹದಿಂದ ತುಂಬಿ ಹರಿಯುತ್ತಿವೆ. ಫುಕುಶಿಮಾ, ಮಿಯಾಗಿ, ಕನಗಾವಾ, ತೋಚಿಗಿ, ಸೈತಮಾ, ನಾಗಾನೊ ಮತ್ತು ಶಿಜುವಾಕಾ ಪ್ರಾಂತ್ಯಗಳು ಭೀಕರ ಚಂಡಮಾರುತದಿಂದ ಹೆಚ್ಚು ಬಾಧಿತವಾಗಿವೆ. 13 ಪ್ರಾಂತ್ಯಗಳಲ್ಲಿ 138,000 ಮನೆಗಳಿಗೆ ಕುಡಿಯುವ ನೀರು, 34,000 ಮನೆಗಳು ವಿದ್ಯುತ್ ಪೂರೈಕೆ ಇಲ್ಲದೆ ಜನರ ತೊಂದರೆಗೊಳಗಾಗಿದ್ದಾರೆ ಎಂದು ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.