ಜಪಾನ್ ನಲ್ಲಿ ಹಗಿಬೀಸ್ ಚಂಡಮಾರುತದ ಅಬ್ಬರ; ಮೃತರ ಸಂಖ್ಯೆ 19ಕ್ಕೆ ಏರಿಕೆ

ಟೋಕಿಯೋ, ಅ 13:   ಜಪಾನ್ ನಲ್ಲಿ ಕಾಣಿಸಿಕೊಂಡಿರುವ ಭೀಕರ ಚಂಡಮಾರುತ ಹಗಿಬೀಸ್ ನಿಂದ ಇಲ್ಲಿಯವರಗೆ 19 ಜನರು ಮೃತಪಟ್ಟು, 16 ಜನರು ನಾಪತ್ತೆಯಾಗಿರುವುದು ವರದಿಯಾಗಿದೆ.  

ಟೋಕಿಯೋ ಮಹಾನಗರ ಸೇರಿದಂತೆ ಹಲವು ಪ್ರದೇಶದ ಒಟ್ಟು 1.40 ಲಕ್ಷ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಕ್ಯೋಡೋ ನ್ಯೂಸ್ ಟ್ಯಾಲಿಯ ಮಾಹಿತಿ ಪ್ರಕಾರ, ಚಂಡಮಾರುತದ ಹಾವಳಿಯಿಂದ 149ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.   

ಭೂಮಿ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, 12 ಪ್ರಾಂತ್ಯಗಳಲ್ಲಿ ಕನಿಷ್ಠ 48 ಭೂಕುಸಿತಗಳು ಮತ್ತು ಮಣ್ಣಿನ ಹರಿವುಗಳು ವರದಿಯಾಗಿವೆ ಮತ್ತು ಒಂಬತ್ತು ನದಿಗಳ ಕೋಡಿ ಒಡೆದಿದೆ. ದೇಶಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಸುಮಾರು 27,000 ಸ್ವರಕ್ಷಣಾ ಪಡೆ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ.

ಚಿಕುಮಾ ನದಿಯ ದಂಡೆ ಕುಸಿದಿದ್ದರಿಂದ ನಾಗಾನೊ ಪ್ರಾಂತ್ಯಕ್ಕೆ ತೀವ್ರ ಹಾನಿಯಾಗಿದ್ದು, ವಸತಿ ಪ್ರದೇಶಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ, ನಾಗಾನೊ ನಗರ ಮತ್ತು ನೆರೆಯ ನಗರಗಳ ಅಧಿಕಾರಿಗಳು ನಿವಾಸಿಗಳಿಗೆ ತಮ್ಮ ಸುರಕ್ಷತೆಗಾಗಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಕರೆ ನೀಡಿದ್ದಾರೆ.

ಆ ಪ್ರದೇಶಗಳಲ್ಲಿ ಸುಮಾರು ಐದು ಮೀಟರ್ ಆಳದವರೆಗೆ ಪ್ರವಾಹದ ನೀರು ನಿಂತಿದ್ದು, ಅದರಲ್ಲಿ ಸಿಲುಕಿದ್ದ ನಿವಾಸಿಗಳು  ತಮ್ಮ ಮನೆಯ ಎರಡನೇ ಮಹಡಿಯ ಬಾಲ್ಕನಿಯಲ್ಲಿ ಬೀಸುತ್ತಿರುವುದು ಕಂಡುಬಂದಿದೆ.    

ನಾಗಾನೊ ನಿಲ್ದಾಣದ ಬಳಿಯ ಪೂರ್ವ ಜಪಾನ್ ರೈಲ್ವೆ ನಿಲ್ದಾಣದಲ್ಲಿನ ಬುಲೆಟ್ ರೈಲುಗಳಿಗೆ ನೀರು ನುಗ್ಗಿದೆ. ಕಂಪನಿಯ ಪ್ರಕಾರ, ಒಟ್ಟು 120 ಬೋಗಿಗಳು ಹಾಗೂ 10 ರೈಲುಗಳು ಹಾನಿಗೊಳಗಾಗಿವೆ.  

ಹಗೀಬಿಸ್ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಸಂಪೂರ್ಣ ಚಿತ್ರಣವನ್ನು ಪಡೆಯಲು ಮತ್ತು ಜನರ ಜೀವ ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರವು ತುರ್ತು ಕಾರ್ಯಪಡೆ ಸ್ಥಾಪಿಸುತ್ತಿದೆ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.