ಸಿಜೆಐ’ಗೆ ಶೂ ಎಸೆದ ವಕೀಲನ ವಿರುದ್ಧ ಶಿಸ್ತು ಕ್ರಮಕ್ಕೆ ಮಾನವ ಬಂಧುತ್ವ ಆಗ್ರಹ

ಸಿಜೆಐ’ಗೆ ಶೂ ಎಸೆದ ವಕೀಲನ ವಿರುದ್ಧ ಶಿಸ್ತು ಕ್ರಮಕ್ಕೆ ಮಾನವ ಬಂಧುತ್ವ ಆಗ್ರಹ     Human fraternity demands disciplinary action against lawyer who threw shoe at CJI

ಸಿಜೆಐ’ಗೆ ಶೂ ಎಸೆದ ವಕೀಲನ ವಿರುದ್ಧ ಶಿಸ್ತು ಕ್ರಮಕ್ಕೆ ಮಾನವ ಬಂಧುತ್ವ ಆಗ್ರಹ     

  ಮುದ್ದೇಬಿಹಾಳ 18: ದೇಶದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿ ವಕೀಲ ರಾಕೇಶ್ ಕಿಶೋರ್ ಮೇಲೆ ಕಠಿಣ ಶಿಕ್ಷೆ ಗುರಿಪಡಿಸುವಂತೆ ಆಗ್ರಹಿಸಿ, ತಾಲೂಕು ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಹಶಿಲ್ದಾರರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ತಹಶಿಲ್ದಾರರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ, ಕ್ಷಮೆ ಕೇಳದ ವಕೀಲನ ವಿರುದ್ಧ ಕೇಂದ್ರ ಸರ್ಕಾರ ಸ್ವಯಂಪ್ರೇರಿತವಾಗಿ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು. 

    ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ಸರ್ವಜನ ಹಿತರಕ್ಷಣೆ ಪ್ರಮುಖವಾಗಿರುವ ಈದೇಶದಲ್ಲಿ ಇಂತಹ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿ. ದೇಶ ದ್ರೋಹಿ ವಕೀಲನನ್ನು ಶಿಕ್ಷೆಗೆ ಗುರುಪಡಿಸುವ ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಬೇಕಾಗಿದೆ. ವಕೀಲನ ಕೃತ್ಯದ ಹಿಂದೆ ಕಾಣದ ಕೈಗಳಿವೆ, ಅವುಗಳನ್ನು ಪತ್ತೆ ಹಚ್ಚಬೇಕು. ಸಿಜೆಐ ಅವರಿಗೆ ಅಪಮಾನ ಮಾಡಿದ ವಕೀಲನ ವಿರುದ್ಧ ಕಠಿಣ ಶಿಕ್ಷೆ ಆಗಬೇಕು, ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಮಾನವ ಬಂಧುತ್ವ ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ ಎಚ್ಚರಿಕೆ ನೀಡಿದರು.           ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆ ಮುಖ್ಯಸ್ಥರಿಗೆ ನ್ಯಾಯಾಲಯದೊಳಗೇ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಇಡೀ ದೇಶದ ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಸನಾತನವಾದಿಗಳು ಅವಮಾನ ಮಾಡಿದ್ದಾರೆ. ಈವರೆಗೂ ಸರ್ಕಾರದ ಮಂತ್ರಿಗಳು ಮತ್ತು ಉನ್ನತ ಸ್ಥಾನದಲ್ಲಿರುವವರು ಇದನ್ನು ಖಂಡಿಸಿ ಮಾತನಾಡದೇ ಇರೋದು ನೋಡಿದರೆ ಪರೋಕ್ಷವಾಗಿ ಇವರೇ ಮನುವಾದಿಗಳಿಗೆ, ಸನಾತನವಾದಿಗಳಿಗೆ ಕುಮಕ್ಕು ನೀಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ. ಕೂಡಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನ್ಯಾ. ಬಿ.ಆರ್ ಗವಾಯಿ ಮೇಲೆ ಹಲ್ಲೆಗೆ ಪ್ರಯತ್ನಿಸಿದ ವಕೀಲ ರಾಕೇಶ್ ಕಿಶೋರ್ನ ಮೇಲೆ ಸುಮೋಟೋ ಕೇಸ್ ದಾಖಲಿಸಿ ಶಿಕ್ಷೆಗೊಳಪಡಿಸಿ ಎಂದು ಸಂಘದ ಸಂಚಾಲಕ ಎಸ್‌.ಎಂ ನೆರಬೆಂಚಿ ಆಗ್ರಹಿಸಿದರು.         ದಲಿತ, ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಮ್ಮನಿದ್ದಾಗ ಕೆಲವು ವಿಶೇಷ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಅವರಿಗೆ ನ್ಯಾಯ ಒದಗಿಸುತಿತ್ತು.  ಆದರೆ, ಈಗ ಸಿಜೆಐ ಮೇಲೆ ನೆಡೆದ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದ್ದು, ಕೇಂದ್ರ ಸರ್ಕಾರ, ಗೃಹ ಇಲಾಖೆಯು ಈವರೆಗೂ ವಕೀಲ ಕಿಶೋರ್ ವಿರುದ್ಧ ಯಾವುದೇ ಕೇಸ್ ಹಾಗೂ ಕ್ರಮ ಕೈಗೊಳ್ಳದೇ ಇರುವುದು ಯಾರ ಸ್ವ-ಹಿತಾಸಕ್ತಿಗೆ ಎಂದು ತಾಲೂಕು ಸಹ ಸಂಚಾಲಕ ರವಿ ನಾಯಕ್ ಕಳವಳ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪ್ರಕಾಶ ಸರೂರ, ಬಿ.ಎಚ್ ಹುಡೇದ, ಎಸ್‌.ಎಸ್ ಸುಳಿಬಾವಿ, ಆರ್‌.ಎಸ್ ರಾಠೋಡ, ವಿ.ವಾಯ್ ಸರೂರ, ಶಂಕರ್ ತಂಗಡಗಿ, ಕೃಷ್ಣ ರಾಠೋಡ, ಮೌನೇಶ ನೇಬಗೇರ, ಸಾಹೇಬಗೌಡ ಪಾಟೀಲ್, ಎ.ಆರ್ ಮುಲ್ಲಾ, ಎಸ್‌.ಎಸ್ ಮೇಟಿ ಸೇರಿದಂತೆ ಹಲವರಿದ್ದರು.