ಮಾನವ ಜನ್ಮ ದೊಡ್ಡದು, ವಿದ್ಯೆ ಅದಕ್ಕಿಂತಲೂ ದೊಡ್ಡದು: ಮನಹಳ್ಳಿ

ಮಾನವ ಜನ್ಮ ದೊಡ್ಡದು, ವಿದ್ಯೆ ಅದಕ್ಕಿಂತಲೂ ದೊಡ್ಡದು: ಮನಹಳ್ಳಿ  Human birth is great, education is even greater: Manahalli

ಬೀಳಗಿ 21: ಮೊದಲು ಶಿಕ್ಷಣ ಪಡೆಯುವುದು ಕಷ್ಟದ ಕೆಲಸವಾಗಿತ್ತು. ಶಿಕ್ಷಣದ ಬಗ್ಗೆ ವ್ಯಾಪಕ ಪ್ರಚಾರ ಇರಲಿಲ್ಲ. ಒಲವು ಇರಲಿಲ್ಲ. ಆದರೂ ಸತ್ಯನಿಷ್ಠ ಜೀವನ ಸಾಗಿಸುತ್ತಿದ್ದರು. ಆಧುನಿಕ ಜೀವನ ರೂಢಿಸಿಕೊಳ್ಳುವುದಕ್ಕಾಗಿ ಶಿಕ್ಷಣದ ಅಗತ್ಯವಿತ್ತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಹನಿರ್ದೇಶಕ ಎಸ್‌. ಆರ್‌. ಮನಹಳ್ಳಿ ಅಭಿಪ್ರಾಯಪಟ್ಟರು.  

ತಾಲೂಕಿನ ಕಾತರಕಿ ಗ್ರಾಮದ ಮಾರುತೇಶ್ವರ ದೇವಾಲಯದಲ್ಲಿ ಗ್ರಾಮದ ಜಿ. ಆರ್‌. ಸುಳ್ಳದ ಪ್ರಾಂಶುಪಾಲರಾಗಿ ವಯೋನಿವೃತ್ತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಜನ್ಮ ದೊಡ್ಡದು, ವಿದ್ಯೆ ಅದಕ್ಕಿಂತಲೂ ದೊಡ್ಡದು ಎಂದು ಹೇಳಿದರು.  

ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ಅಕ್ಷತಾ ಕೊಣ್ಣೂರ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದಿದ್ದರಿಂದ ಶಿಕ್ಷಣ ಸಚಿವರು, ಡಿಸಿಎಂ, ಸಿಎಂ ವಿಧಾನಸೌಧದಲ್ಲಿ ಸನ್ಮಾನಿಸಿದ್ದನ್ನು ನೋಡಿದರೆ ಶಿಕ್ಷಣ ಏನೆಲ್ಲಾ ಸಾಧನೆ ಮಾಡಬಹುದೆಂಬುದಕ್ಕೆ ಸಾಕ್ಷಿಯಾಗಿದೆ ಎಂದರು.  

ಸಜ್ಜನರಿಗೆ ಸನ್ಮಾನ ಮಾಡಬೇಕು. ಗುಣಕ್ಕೆ ಗೌರವವಾಗಬೇಕು. ಅಂದಾಗ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಈ ದೆಸೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಜಿ. ಆರ್‌. ಸುಳ್ಳದ ದಂಪತಿಗಳನ್ನು ಸನ್ಮಾನಿಸುತ್ತಿರುವುದು ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದಲ್ಲದೇ, ಇದೊಂದು ಮಾದರಿ ಕಾರ್ಯಕ್ರಮವೆಂದು ಶ್ಲಾಘಿಸಿದರು.  

ಗ್ರಾಮದ ಮುಖಂಡರಾದ ಮಲ್ಲಪ್ಪ ಕೌಜಲಗಿ, ವೆಂಕಪ್ಪ ಮಾಚಪ್ಪನವರ, ಹಂಪಣ್ಣ ಅಂಗಡಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಎಂ. ಸಾಹುಕಾರ ಮಾತನಾಡಿದರು. ವಿಶ್ರಾಂತ ಉಪನ್ಯಾಸಕ ಶ್ರೀಶೈಲ ಬೊಮ್ಮಣ್ಣವರ ಉಪನ್ಯಾಸ ನೀಡಿದರು. ಶಿಕ್ಷಕ ಸಿದ್ದು ಸುಳ್ಳದ ಪ್ರಾಸ್ತಾವಿಕ ನುಡಿ ಹೇಳಿದರು.  

ನಿವೃತ್ತ ಪ್ರಾಚಾರ್ಯ ಜಿ. ಆರ್‌. ಸುಳ್ಳದ ಸನ್ಮಾನ ಸ್ವೀಕರಿಸಿ ಮಾತನಾಡಿ, 32 ವರ್ಷಗಳ ಸೇವಾ ಅನುಭವ, ತಾವು ಅಂದು ಶಿಕ್ಷಣ ಪಡೆಯುವ ಸಂದರ್ಭವನ್ನು ಮೆಲಕು ಹಾಕಿದರಲ್ಲದೇ, ತಂದೆ-ತಾಯಿಯ ಮಾರ್ಗದರ್ಶನ, ಸಹೋದರರ, ಸಹೋದರಿಯರ ತ್ಯಾಗದಿಂದ ಶಿಕ್ಷಣ ಪಡೆದು, ದಕ್ಷತೆಯಿಂದ ಸೇವೆ ಸಲ್ಲಿಸಿದ್ದರಿಂದ ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತೆಂದು ಬಾವುಕರಾಗಿ ಹೇಳಿದರು.  

ಸನ್ಮಾನ: ಕಾತರಕಿ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಗಣ್ಯರು, ಸುಳ್ಳದ ಬಂಧು ಬಳಗದವರು ನಿವೃತ್ತ ಪ್ರಾಚಾರ್ಯ ಜಿ. ಆರ್‌. ಸುಳ್ಳದ ಮತ್ತು ಜ್ಯೋತಿ ಸುಳ್ಳದ ದಂಪತಿಗಳನ್ನು ಸನ್ಮಾನಿಸಿ ಶುಭ ಕೋರಿದರು. ಕಂದಗಲ್ ಹನುಮಂತರಾಯ ವೃತ್ತಿರಂಗಭೂಮಿ ಟ್ರಸ್ಟ್‌ ಸದಸ್ಯರಾಗಿ ನೇಮಕಗೊಂಡ ಪತ್ರಕರ್ತ ಡಿ. ಎಂ. ಸಾವಕಾರ ಅವರನ್ನು ಸನ್ಮಾನಿಸಿದರು.   

ವೇದಿಕೆ ಮೇಲೆ ಗ್ರಾಪಂ ಮಾಜಿ ಅಧ್ಯಕ್ಷ ಸಂಗಪ್ಪ ಕೆರಕಲಮಟ್ಟಿ, ತಾಪಂ ಮಾಜಿ ಅಧ್ಯಕ್ಷ ಹನಮಂತ ನಾಯ್ಕರ, ಮುಖ್ಯೋಪಾಧ್ಯಾಯರಾದ ಎಚ್‌. ಎಂ. ನಾಯಕ, ಕಲ್ಯಾಣಮಠ, ಭೀಮಸೇನ ಕುಲಕರ್ಣಿ ಮತ್ತಿತರಿದ್ದರು.   

ನಕುಲ ಬೆಳ್ಳುಬ್ಬಿ ನಿರೂಪಿಸಿದರು. ನೀಲಪ್ಪ ಹೊಸಕೋಟಿ ಸ್ವಾಗತಿಸಿದರು. ಬಸವರಾಜ ಸುಳ್ಳದ ವಂದಿಸಿದರು.