ರಾಸಾಯನಿಕ ಮಾವುಗಳ ಭರ್ಜರಿ ಮಾರಾಟ. ಕಠಿಣ ಕ್ರಮಕ್ಕೆ ಆಗ್ರಹ: ಸುರೇಶ್ ಬಿ.ಇಟ್ನಾಳ

ರಾಸಾಯನಿಕ ಮಾವುಗಳ ಭರ್ಜರಿ ಮಾರಾಟ. ಕಠಿಣ ಕ್ರಮಕ್ಕೆ ಆಗ್ರಹ: ಸುರೇಶ್ ಬಿ.ಇಟ್ನಾಳ    Huge sale of chemical mangoes. Demand for strict action: Suresh B. Itnal

    ಕೊಪ್ಪಳ  12:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರಾಜ್ಯಾದಾದ್ಯಂತ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು ಸೇರಿದಂತೆ ವಿವಿಧ ಹಣ್ಣುಗಳ ಭರ್ಜರಿ ಮಾರಾಟ ತಡೆಗಟ್ಟಲು ಹಾಗೂ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ ಅವರ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.     

ಮನವಿಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದ್ದು, ರಾಜ್ಯದ ಮಾರುಕಟ್ಟೆಯಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಮಾಗಿಸಿದ ಮಾವಿನ ಹಣ್ಣು ಸೇರಿದಂತೆ ಹಲವು ಹಣ್ಣುಗಳನ್ನು ಭರ್ಜರಿ ಮಾರಾಟ ನಡೆಯುತ್ತಿದೆ.ಆದರೆ ಅತ್ಯಂತ ವಿಷಾದದ ಸಂಗತಿಯೆಂದರೆ ಇವೆಲ್ಲ ನಡೆಯುತ್ತಿರುವುದು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ಗೊತ್ತಿದ್ದರೂ ಸಹ ಏನು ತಿಳಿಯದಂತೆ ನಟರು ನಾಚುವಂತೆ ನಟಿಸುತ್ತಾರೆ.ಜನರು ಕೊಡುವ ತೆರಿಗೆಯಿಂದ ವೇತನ ಪಡೆದು ಅದೇ ಜನರಿಗೆ ದ್ರೋಹ ಬಗೆಯುವದು ಅನ್ನ ತಿಂದ ಮನೆಗೆ ಕನ್ನ ಹಾಕಿದಂತೆ ಆಗುತ್ತದೆ.

ಜನರಿಂದ ದೂರುಗಳನ್ನು ಬರಲಿ ಎಂದು ನೆಪ ಮಾಡಿಕೊಂಡು ಕಛೇರಿಯಲ್ಲಿ ಸಹಿ ಹಾಕಿ ಕೊಡುವ ಬದಲು ಕೃತಕವಾಗಿ ಮಾಗಿಸುವ ಮಾವು ಸೇರಿದಂತೆ ವಿವಿಧ ಹಣ್ಣುಗಳ ಮಾರಾಟ ಮಾಡುವ ಅಂಗಡಿಗಳಿಗೆ ಸ್ವಯಂ ಪ್ರೇರಿತವಾಗಿ ಅನೀರೀಕ್ಷಿತ ದಾಳಿ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು.ಹೆಚ್ಚು ಲಾಭದ ಆಸೆಗೆ ಬಿದ್ದ ಬಹುತೇಕ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ಕ್ಯಾಲ್ಸಿಯಂ ಕಾರ್ಬೈಡ್ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಮಾವಿನ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸುತ್ತಿದ್ದಾರೆ.ಕೃತಕವಾಗಿ ರಾಸಾಯನಿಕದಿಂದ ಮಾಗಿಸಿದ ಹಣ್ಣುಗಳನ್ನು ಸೇವಿಸುವುದರಿಂದ ರಾಜ್ಯದ ಸಾರ್ವಜನಿಕರಲ್ಲಿ ಕ್ಯಾನ್ಸರ್‌.ನರಮಂಡಲದ ಕಾಯಿಲೆಗಳು ಮತ್ತು ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧೀನದ ಆಹಾರ ಸುರಕ್ಷತಾ ಇಲಾಖೆ ಹಾಗೂ ಸಂಬಂಧಪಟ್ಟ ಸ್ಥಳೀಯ ಆಡಳಿತದ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ.ಜನರ ತೆರಿಗೆ ಹಣದಲ್ಲಿ ವೇತನ ಪಡೆಯುವ ಅಧಿಕಾರಿಗಳು ಮಾರುಕಟ್ಟೆಗಳಲ್ಲಿ ಸೂಕ್ತ ತಪಾಸಣೆ ನಡೆಸದೆ, ಹಗಲಲ್ಲೇ ಇಂತಹ ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಮಾನವ ಆರೋಗ್ಯಕ್ಕೆ ಅಪಾಯಕಾರಿಯಾದ ರಾಸಾಯನಿಕ ಬಳಸಿ ಮಾಗಿಸಿದ ವಿಷಪೂರಿತ ಹಣ್ಣುಗಳ ಮಾರಾಟ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವುದು ಖಂಡನೀಯವಾಗಿದೆ.     

ರಾಜ್ಯದ ಬಹುಜನರ ಪ್ರಮುಖ ಬೇಡಿಕೆಗಳು.   ತಕ್ಷಣದ ದಿಢೀರ್ ಭೇಟಿ ತಪಾಸಣೆ: ರಾಜ್ಯದ ಎಲ್ಲಾ ಪ್ರಮುಖ ಮಾರುಕಟ್ಟೆಗಳು ಮತ್ತು ಹಣ್ಣಿನ ಮಳಿಗೆಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ದಿಢೀರ್ ದಾಳಿ ನಡೆಸಿ,ರಾಸಾಯನಿಕ ಬಳಸಿ ಹಣ್ಣಾಗಿಸಿದ ಹಣ್ಣುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು.ಅಧಿಕಾರಿಗಳ ಹೊಣೆಗಾರಿಕೆ: ಕರ್ತವ್ಯ ಲೋಪ ಎಸಗಿರುವ ಮತ್ತು ಇಂತಹ ಮಾರಾಟಕ್ಕೆ ಪರೋಕ್ಷವಾಗಿ ಸಹಕರಿಸುತ್ತಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೇಲೆ ತಕ್ಷಣ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಬೇಕು.   ಜಾಗೃತಿ ಮತ್ತು ಕಠಿಣ ಕಾನೂನು:ಕೃತಕವಾಗಿ ಹಣ್ಣಾಗಿಸುವ ಪದ್ಧತಿಯನ್ನು ತಡೆಯಲು ವ್ಯಾಪಾರಿಗಳಿಗೆ ಕಠಿಣ ಕಾನೂನು ರೂಪಿಸಿ ಜಾರಿಗೆ ತರಬೇಕು ಹಾಗೂ ಆಯಾ ಜಿಲ್ಲೆಗಳಲ್ಲಿ ನಡೆಯುವ ಮಾವು ಮೇಳಗಳಲ್ಲೂ ಕೃತಕವಾಗಿ ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಮಾಗಿಸುವವರು ನುಸುಳುವ ಸಾಧ್ಯತೆ ಹೆಚ್ಚಿದ್ದು ಎಚ್ಚರ ವಹಿಸುವಂತೆ ಸುತ್ತೋಲೆ ಹೊರಡಿಸಬೇಕು.ರಾಸಾಯಕ ಮಾವು ಮಾರುವವರನ್ನು ಮಾವು ಮೇಳ ಗಳಿಂದ ಹೊರಹಾಗಬೇಕು.

ಆಯಾ ಜಿಲ್ಲೆಗಳಲ್ಲಿ ನಡೆಯುವ ಮಾವು ಮೇಳಗಳಿಗೆ ಬರುವ ಮತ್ತು ಆಯಾ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ನೈಸರ್ಗಿಕ ಹಣ್ಣುಗಳನ್ನು ಗುರುತಿಸಲು ಮಾವಿನ ಹಣ್ಣು ನೀರಿನಲ್ಲಿ ಹಾಕಿದಾಗ ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ಮೇಲಕ್ಕೆ ತೇಲುತ್ತವೆ (ಏಕೆಂದರೆ ಅವುಗಳ ಒಳಗೆ ಗಾಳಿಯ ಚೀಲಗಳಿರುತ್ತವೆ), ಆದರೆ ನೈಸರ್ಗಿಕ ಹಣ್ಣುಗಳು ತಳಕ್ಕೆ ಹೋಗುತ್ತವೆ ಇದನ್ನು ಜಾಗೃತಿ ಮೂಡಿಸಬೇಕು.   ಜಿಲ್ಲಾ ಮಟ್ಟದಲ್ಲಿ ಲ್ಯಾಬ್ ಪರೀಕ್ಷೆ: ಪ್ರತಿ ಜಿಲ್ಲೆಯಲ್ಲೂ ಹಣ್ಣುಗಳ ಗುಣಮಟ್ಟ ಪರೀಕ್ಷಿಸಲು ತುರ್ತು ಪ್ರಯೋಗಾಲಯದ ವ್ಯವಸ್ಥೆ ಮಾಡಬೇಕು.ಆರೋಗ್ಯದ ದೃಷ್ಟಿಯಿಂದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಜನತೆಗೆ ವಿಷಮುಕ್ತ ಹಣ್ಣುಗಳು ಸಿಗುವಂತಾಗಲು ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ.ಗಫಾರ್‌.ದಲಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಸುಂಕಪ್ಪ ಮೀಸಿ. ಪ್ರಜಾ ಶಕ್ತಿ ಕನ್ನಡಪರ ವೇದಿಕೆಯ ಜಿಲ್ಲಾ ಖಜಾಂಚಿ ಡಿ.ಮುದ್ದುರಾಜ್ ಚನ್ನದಾಸರ್‌. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮೊಹಮ್ಮದ್ ಗೌಸ್ ನೀಲಿ. ಬಿಬಿಎಸ್ ಮುಖಂಡ ಕಾಶಪ್ಪ ಚಲವಾದಿ. ಶಿವರಾಜ್ ಚಲವಾದಿ ಮುಂತಾದವರು ಮನವಿ ಮೂಲಕ ಕೋರಿದರು.