ಹೌಸ್ಟನ್ ನಲ್ಲಿ ಹೌಡಿ ಮೋದಿ : ಪ್ರಧಾನಿ ಮೋದಿ - ಟ್ರಂಪ್ ಭಾಗಿ

ವಾಷಿಂಗ್ ಟನ್, ಸೆ 16   ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಹೌಸ್ಟನ್ ನಲ್ಲಿ  ಇದೇ 22ರಂದು ನಡೆಯಲಿರುವ ಬೃಹತ್ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಮೆರಿಕದ ಶ್ವೇತ ಭವನ ತಿಳಿಸಿದೆ. 

  ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಸ್ಟೆಫನ್ ಗ್ರೀಶಮ್, ಟ್ರಂಪ್ ಆಡಳಿತದಲ್ಲಿ ಭಾರತ- ಅಮೆರಿಕ ಸಂಬಂಧಗಳಲ್ಲಿನ ನೂತನ ಸ್ನೇಹಶೀಲತೆಯ ಪ್ರತಿಬಿಂಬಕವಾಗಿ ಇತ್ತೀಚಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಜಂಟಿ ರಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 

  ಹ್ಯೂಸ್ಟನ್ನ ಎನ್ಆರ್ಜಿ ಕ್ರೀಡಾಂಗಣದಲ್ಲಿ ಸೆಪ್ಪೆಂಬರ್ 22ರಂದು ನಡೆಯಲಿರುವ ಮೆಗಾ ಹೌಡಿ, ಮೋದಿ, ಕನಸುಗಳ ವಿನಿಮಯ, ಭವಿಷ್ಯದ ಉಜ್ವಲ ಕಾರ್ಯಕ್ರಮಕ್ಕಾಗಿ ಅಮೆರಿಕದಾದ್ಯಂತ ಸುಮಾರು 50 ಸಾವಿರಕ್ಕೂ ಹೆಚ್ಚು ಭಾರತ- ಅಮೆರಿಕನ್ನರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.  

  ನರೇಂದ್ರ ಮೋದಿ ಮತ್ತು ಟ್ರಂಪ್ ನಡುವಿನ ಜಂಟಿ ಯರ್ಾಲಿಯು ಅಮೆರಿಕ ಮತ್ತು ಭಾರತದ ಜನರ ನಡುವಿನ ಬಲವಾದ ಬಾಂಧವ್ಯವನ್ನು ಒತ್ತಿ ಹೇಳಲು ಉತ್ತಮ ಅವಕಾಶವಾಗಿದೆ ಎಂದು ಗ್ರೀಶಮ್ ಹೇಳಿದ್ದಾರೆ.  ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಹರ್ಷವರ್ಧನ್ ಶೃಂಗ್ಲಾ, ಈ ಕಾರ್ಯಕ್ರಮದಲ್ಲಿ ಟ್ರಂಪ್ ಪಾಲ್ಗೊಳ್ಳುವಿಕೆ ಐತಿಹಾಸಿಕ ಮತ್ತು ಅಭೂತಪೂರ್ವ ಎಂದು ಕರೆದಿದ್ದಾರೆ. ಜತೆಗೆ ಉಭಯ ದೇಶಗಳ ನಡುವಿನ ಸ್ನೇಹ, ಸಂಬಂಧ ಸಹಕಾರ ಮತ್ತು ಅಭಿವೃದ್ದಿಯ ಪ್ರತಿಬಿಂಬವಾಗಿದೆ ಎಂದಿದ್ದಾರೆ. 

  ಹೌ ಡು ಯು ಡೂ - ನೀವು ಹೇಗಿದ್ದೀರಿ ಎನ್ನುವುದರ ಸಂಕ್ಷಿಪ್ತ ರೂಪ ಹೌಡಿ ಆಗಿದ್ದು, ನೈಋತ್ಯ ಅಮೆರಿಕದಲ್ಲಿ ಸಾಮಾನ್ಯವಾಗಿ ಸ್ನೇಹಪರವಾಗಿ ಬಳಸುವ ಪದ ಇದಾಗಿದೆ.  

  ಉಭಯ ನಾಯಕರ ನಡುವೆ ಈ ವರ್ಷ ನಡೆಯಲಿರುವ ಮೂರನೇ ಸಭೆ ಇದಗಿದೆ. ಜಪಾನ್ ನಲ್ಲಿ ಜಿ 20 ಶೃಂಗಸಭೆಯ ನೇಪಥ್ಯದಲ್ಲಿ ಜೂನ್ ನಲ್ಲಿ ಹಾಗೂ ಫ್ರಾನ್ಸ್ ನಲ್ಲಿ ಆಗಸ್ಟ್ ನಲ್ಲಿ ನಾಯಕರು ಮಾತುಕತೆ ನಡೆಸಿದ್ದರು.