ಭಾರಿ ಮಳೆಯಿಂದ ಮನೆ ಹಾನಿ: ಸ್ಥಳಕ್ಕೆ ಭೇಟಿ ನೀಡಿ ನೆರವಿನ ಭರವಸೆ

ಭಾರಿ ಮಳೆಯಿಂದ ಮನೆ ಹಾನಿ: ಸ್ಥಳಕ್ಕೆ ಭೇಟಿ ನೀಡಿ ನೆರವಿನ ಭರವಸೆ House damaged due to heavy rain: Site visit made, assurance of assistance given

  ಸವದತ್ತಿ  09: ನಗರದ ಕೊಳ್ಳಾರ ಓಣಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಾಳಪ್ಪ ಮಲ್ಲಪ್ಪ ತೇಗೂರ ಮೇದಾರ ಅವರ ಮನೆ ಕುಸಿದು ಬಿದ್ದಿದೆ. ಘಟನೆಯನ್ನು ತಿಳಿದ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಮನೆ ಕುಸಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಬಾಲಕಿಯೊಬ್ಬಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಆರೋಗ್ಯ ವಿಚಾರಿಸಿದ ವಿರೂಪಾಕ್ಷ ಮಾಮನಿ ಅವರು, ಆಕೆಗೆ ಅಗತ್ಯವಿರುವ ಸೂಕ್ತ ಚಿಕಿತ್ಸೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ದೊರಕಬೇಕಾದ ಎಲ್ಲ ರೀತಿಯ ಪರಿಹಾರಗಳನ್ನು ಶೀಘ್ರವಾಗಿ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿದ ಅವರು, ಸಂತ್ರಸ್ತ ಕುಟುಂಬಕ್ಕೆ ತುರ್ತಾಗಿ ಅಗತ್ಯ ನೆರವು ಒದಗಿಸುವಂತೆ ಮತ್ತು ಸರ್ಕಾರಿ ನಿಯಮಾನುಸಾರ ಸಿಗಬೇಕಾದ ಪರಿಹಾರದ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ರವಿ ಖೊಂದಾಪುರ, ಪುಂಡಲೀಕ ಮಾದರ, ಚೇತನ ಸುತಗಟ್ಟಿ, ವೆಂಕಟೇಶ ಮೆಟ್ಟಿನ, ವೆಂಕಟೇಶ ಕಾರ್ಲವಾಡ ಮತ್ತು ಮಹಾಂತೇಶ ತೇಗೂರ ಮುಂತಾದವರು ಉಪಸ್ಥಿತರಿದ್ದರು.