ಇಂದು ಥಿಯೇಟರ್‌ನಲ್ಲಿ ಹಾಲಿವುಡ್ ಶೈಲಿಯ ‘ಟೆಡ್ಡಿ ಬೇರ್‌’

Hollywood style 'Teddy Bear' in theaters today

ಇದು ವಿಶೇಷವಾದ ಸೈಕಾಲಜಿಕಲ್, ಹಾರರ್, ಥ್ರಿಲ್ಲರ್ ಚಿತ್ರ  

ಕನ್ನಡದಲ್ಲಿ ಹಾಲಿವುಡ್ ಶೈಲಿಯ ಸಿನಿಮಾವೊಂದು ತಯಾರಾಗಿದೆ. ಆ ಚಿತ್ರದ ಹೆಸರು ‘ಟೆಡ್ಡಿ ಬೇರ್‌’. ಇಂದು (ಜು.10) ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ವಿಶೇಷವಾದ ಹಾಡೊಂದರಿಂದ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದೆ ‘ಟೆಡ್ಡಿ ಬೇರ್‌’. ವಿಭಿನ್ನ ಕಥಾ ಹಂದರ ಒಳಗೊಂಡ, ಹೊಸತರ ಹಾರರ್ ಕಂಟೆಂಟ್ ಒಳಗೊಂಡ ಸಿನಿಮಾ ಇದಾಗಿದೆ. ಜೊತೆಗೆ ಇದೊಂದು ಸೈಕಾಲಜಿಕಲ್, ಹಾರರ್, ಥ್ರಿಲ್ಲರ್ ಚಿತ್ರವಾಗಿದ್ದು, ಕನ್ನಡದಲ್ಲಿ ಹೊಸ ಪ್ರಯತ್ನ ಎನ್ನಬಹದು. ಇನ್ನು ಚಿತ್ರದ ಕಂಟೆಂಟ್ ಹಾಗೂ ಮೆಕಿಂಗ್‌ನಿಂದ ನಮ್ಮ ಚಿತ್ರವನ್ನು ಕನ್ನಡಿಗರು ಗೆಲ್ಲಿಸಿ, ಶತದಿನೋತ್ಸವ ಆಚರಿಸುವಂತೆ ಮಾಡುತ್ತಾರೆ ಎಂಬ ಬರವಸೆರ ಚಿತ್ರತಂಡದಲ್ಲಿದೆ.  

ಈಗಾಗಲೇ ಸೆನ್ಸಾರ್‌ನಿಂದ ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ ಸಿನಿಮಾ. ಸಾಮಾನ್ಯವಾಗಿ ಟೆಡ್ಡಿ ಬೇರ್‌ನ್ನು ಸಿಂಬಾಲ್ ಆಪ್ ಲವ್ ಎನ್ನುತ್ತಾರೆ. ಆದರೆ ಈ ಚಿತ್ರದಲ್ಲಿ ಟೆಡ್ಡಿ ಬೇರ್‌ನ್ನು ಸಿಂಬಾಲ್ ಆಪ್ ಹಾರರ್ ಆಗಿ ತೋರಿಸಲಾಗಿದೆ. ಚಿತ್ರದ ನಾಯಕನಾಗಿ ಸುಪ್ರಿಂ ಸ್ಟಾರ್ ಭಾರ್ಗವ್ ಅಭಿನಯ ಮಾಡಿದ್ದು, ಇವರಿಲ್ಲಿ ಸೈಕಾಲಜಿಕಲ್ ಡಾಕ್ಟರ್ ಪಾತ್ರ ಮಾಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುವ ಭಾರ್ಗವ್ ‘ಸಾಮಾನ್ಯವಾಗಿ ವಿಜ್ಞಾನ ನಂಬುವವರು ದೇವರನ್ನು ನಂಬಲ್ಲ. ದೇವರನ್ನು ನಂಬುವವರು ಸೈನ್ಸ್‌ ನಂಬಲ್ಲ. ಆದರೆ ನನ್ನ ಪಾತ್ರ ಭಗವದ್ಗೀತೆ ಓದಿಕೊಂಡಿರುತ್ತದೆ. ಜೊತೆಗೆ ಸೈನ್ಸ್ನಲ್ಲೂ ನಂಬಿಕೆ ಹೊಂದಿದೆ. ಈ ಎರಡು ವಿಚಾರವನ್ನು ಹೇಗೆ ಬ್ಯಾಲೆನ್ಸ್‌ ಮಾಡುತ್ತಾನೆ ಎಂಬುದೇ ಕಥಾ ನಾಯಕನ ಪಾತ್ರ’ ಎನ್ನುವರು. ’ಪರಿಶುದ್ದಂ’ ಸೇರಿದಂತೆ ಆರು ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯ ಮಾಡಿರುವ ಭಾರ್ಗವ್‌ಗೆ ‘ಟೆಡ್ಡಿ ಬೇರ್‌’ ಹೊಸ ಭರವಸೆ ನೀಡಿರುವ ಪಾತ್ರ ಎನ್ನುವುದು ವಿಶೇಷ.  

ಆದ್ಯಲಕ್ಷ್ಮಿ ಪ್ರೊಡಕ್ಷನ್ ಅಡಿಯಲ್ಲಿ ಜ್ಯೋತಿ ತಾರಕೇಶ್, ಭರತ್ ಮತ್ತು ನವೀನ್ ಜಂಟಿಯಾಗಿ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಟಾಲಿವುಡ್‌ನ ಪುರಿಜಗನ್ನಾಥ್ ಸಹಾಯಕರಾಗಿದ್ದ ಲೋಕೇಶ್‌.ಬಿ ಕಥೆ, ಚಿತ್ರಕಥೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯರಾಗಿ ಶೈಲಜ ಸಿಂಹ, ದೀನ ಪೂಜಾರಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಸ್ವರ್ಶ ರೇಖಾ, ದಿಶಾ ಪೂವಯ್ಯ, ಕಿಟ್ಟಿ ತಾಳಿಕೋಟೆ, ಮುತ್ತು, ಅರವಿಂದ್, ಬೇಬಿ ಅಕ್ಷರ ಮುಂತಾದವರು ಇದ್ದಾರೆ. ಚಿತ್ರಕ್ಕೆ ವಿವೇಕ್ ಜಂಗ್ಲಿ ಸಂಗೀತ, ದೀಪು-ಬೆನಕರಾಜ್ ಛಾಯಾಗ್ರಹಣ, ಸಂತೋಷ್ ಸಂಕಲನ, ಸ್ಟಂಟ್ ಶಿವ-ಗಣೇಶ್‌-ಚನ್ನಕೃಷ್ಣ ಸಾಹಸವಿದೆ. ಅಂದಂಗೆ ಈ ‘ಟೆಡ್ಡಿ ಬೇರ್‌’ನಲ್ಲಿ ಮಧ್ಯಮ ಭಾಗದ ಕಥೆಯನ್ನು ಹೇಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಿಕ್ವೆಲ್, ಸೀಕ್ವಲ್ ಬರಲಿದೆ. ನಿರ್ದೇಶಕರು ಸಂಶೋಧನೆ ನಡೆಸಿ ಸನ್ನಿವೇಶಗಳನ್ನು ಸೃಷ್ಟಿಸಿರುವುದು ವಿಶೇಷ. ಜೊತೆಗೆ ಕ್ಲೈಮಾಕ್ಸ್‌ನಲ್ಲಿ ಬರುವ ಕಾಲ ಭೈರವೇಶ್ವರ ಸ್ವಾಮಿಯ ಹಾಡು ಕೂಡ ಚಿತ್ರದ ಹೈಲೈಟ್ ಎನ್ನಬಹುದು.